ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳು ಕಳ್ಳತನದ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಒಟ್ಟು ೬ ಕೋಟಿ ೩೬ ಲಕ್ಷ ೯೩ ಸಾವಿರದ ೭೪೩ ರೂಪಾಯಿ ಮೌಲ್ಯದ ಸ್ವತ್ತನ್ನು ‘ಪ್ರಾಪರ್ಟಿ ಪರೇಡ್’ ಮೂಲಕ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೂರುದಾರರಿಗೆ ಅವರ ಕಳೆದುಹೋದ ವಸ್ತುಗಳನ್ನು ಗೌರವಪೂರ್ವಕವಾಗಿ ಮರಳಿಸಲಾಯಿತು. ೨೦೨೫ ರಲ್ಲಿ ನಗರದ ವಿವಿಧ ಭಾಗಗಳಲ್ಲಿ ನಡೆದ ಮನೆಗಳ್ಳತನ, ಸರಗಳ್ಳತನ ಮತ್ತು ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿ ಪೊಲೀಸರು ಈ ಮಾಲನ್ನು ಜಪ್ತಿ ಮಾಡಿದ್ದರು. ಇದರಲ್ಲಿ ೨ ಕೋಟಿ ೩೬ ಲಕ್ಷ ರೂಪಾಯಿ ಮೌಲ್ಯದ ಸುಮಾರು ೨ ಕೆಜಿ ೩೩೨ ಗ್ರಾಂ ಚಿನ್ನಾಭರಣ ಮತ್ತು ೪ ಕೋಟಿ ರೂಪಾಯಿ ಮೌಲ್ಯದ ೮೫ ವಾಹನಗಳು (ಭಾರಿ ಟ್ರಕ್ ಮತ್ತು ಕಾರುಗಳು ಸೇರಿ) ಒಳಗೊಂಡಿವೆ. ಹಾಗೆಯೇ ಸಿಐಆರ್ (CEIR) ಪೋರ್ಟಲ್ ಮೂಲಕ ಪತ್ತೆಹಚ್ಚಲಾದ ೧೪೦ ಮೊಬೈಲ್ಗಳನ್ನು ಸಹ ಈ ಸಂದರ್ಭದಲ್ಲಿ ಮಾಲೀಕರಿಗೆ ನೀಡಲಾಯಿತು.

ಪೊಲೀಸ್ ಇಲಾಖೆಯು ತಾಂತ್ರಿಕ ತನಿಖೆಯ ಆಧಾರದ ಮೇಲೆ ಕಳ್ಳರನ್ನು ಬಂಧಿಸಿ ಈ ಎಲ್ಲಾ ಮಾಲನ್ನು ವಶಪಡಿಸಿಕೊಂಡಿದ್ದು, ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಸಾರ್ವಜನಿಕರಿಗೆ ಮರಳಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಳೆದುಹೋಗಿದ್ದ ೧೪೫ ಗ್ರಾಂ ಚಿನ್ನದ ಪೈಕಿ ೧೧೫ ಗ್ರಾಂ ಚಿನ್ನ ಮತ್ತು ದ್ವಿಚಕ್ರ ವಾಹನ ಮರಳಿ ದೊರೆತಿದ್ದಕ್ಕಾಗಿ ಶಾಂತಿನಗರದ ಡಾ. ಎಂ. ಎ. ಮರಳಿ ಅವರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

ವೈಭವ ನಗರದ ಗಣೇಶ ದೇವಸ್ಥಾನದಲ್ಲಿ ಕಳವಾಗಿದ್ದ ಪೂಜಾ ಸಾಮಗ್ರಿಗಳು ಮರಳಿ ಸಿಕ್ಕಿದ್ದಕ್ಕೆ ಅರ್ಚಕರಾದ ಸಿದ್ದಲಿಂಗಯ್ಯ ಹಿರೇಮಠ ಅವರು ಸಂತಸ ವ್ಯಕ್ತಪಡಿಸಿದರು. ಅಲ್ಲದೆ, ಸುಳೇಭಾವಿಯ ಗೀತಾ ದೂದಗಿ ಅವರು ಕೂಡ ತಮ್ಮ ಕಳವಾಗಿದ್ದ ೬ ತೊಲೆ ಚಿನ್ನವನ್ನು ಪೊಲೀಸರು ಪತ್ತೆಹಚ್ಚಿಕೊಟ್ಟಿದ್ದಕ್ಕಾಗಿ ಪೊಲೀಸ್ ಇಲಾಖೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಯಶಸ್ವಿ ತನಿಖಾ ಪ್ರಕ್ರಿಯೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳು, ಸಬ್ ಇನ್ಸ್ಪೆಕ್ಟರ್ಗಳು ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಶಹಾಪುರ, ಖಡೇಬಜಾರ್, ಟಿಳಕವಾಡಿ ಮತ್ತು ಇತರ ಠಾಣೆಗಳ ಈ ಸಾಧನೆಯನ್ನು ಪರಿಗಣಿಸಿದ ಪೊಲೀಸ್ ಆಯುಕ್ತರು ಸಂಬಂಧಿತ ತಂಡಗಳನ್ನು ವಿಶೇಷವಾಗಿ ಶ್ಲಾಘಿಸಿದರು ಮತ್ತು ಭವಿಷ್ಯದಲ್ಲಿಯೂ ಸಾರ್ವಜನಿಕರು ತನಿಖೆಗೆ ಸಹಕರಿಸಬೇಕೆಂದು ಕರೆ ನೀಡಿದರು.
