“ರಕ್ತದಾನವು ಮಹಾದಾನವಾಗಿದ್ದು, ಇದು ಒಬ್ಬರ ಜೀವ ಉಳಿಸುವ ಪವಿತ್ರ ಕಾರ್ಯವಾಗಿದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರ ಜೊತೆಗೆ ಆರೋಗ್ಯಕ್ಕೂ ಲಾಭವಾಗುತ್ತದೆ. ಈ ಮಹತ್ವವನ್ನು ಮನಗಂಡು ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದೆ,” ಎಂದು ಚಿಕ್ಕೋಡಿಯ ಹೆಸರಾಂತ ದಿಯಾ ಆಸ್ಪತ್ರೆಯ ವೈದ್ಯರಾದ ಡಾ. ಸಂಜಯ್ ಪಾಟೀಲ್ ಶಿರಗುಪ್ಪಿಯಲ್ಲಿ ಹೇಳಿದರು.

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸಹಕಾರಿ ಧುರೀಣರು ಹಾಗೂ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಾದ ಜಿನ್ನಪ್ಪಾ ಪಾರೀಸಾ ಚೌಗುಲೆ ಅವರ 10ನೇ ಪುಣ್ಯತಿಥಿ ಅಂಗವಾಗಿ ಮಂಗಳವಾರ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರದಲ್ಲಿ ಸಂಸ್ಥೆಯ ಸಂಚಾಲಕರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಚಿಕ್ಕೋಡಿಯ ಆದರ್ಶ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತ ಸಂಗ್ರಹಣೆ ನಡೆಯಿತು. ಶಿಬಿರದ ವೇಳೆ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ಉಚಿತ ಆರೋಗ್ಯ ತಪಾಸಣೆ, ಹಿಮೋಗ್ಲೋಬಿನ್ (HB) ಹಾಗೂ ರಕ್ತದ ಗುಂಪು ಪರಿಶೀಲನೆಯನ್ನು ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಭಮ್ಮಣ್ಣಾ ಚೌಗುಲೆ, ಭಾವುಸಾಬ ಕುರುಂದವಾಡೆ, ತಾತ್ಯಾಸಾಬ ಚೌಗುಲೆ, ಶಂಕರ್ ಸವದೆ, ಅಣ್ಣಾಸಾಬ ಚಂದುರೆ, ಸರ್ಜೆರಾವ ಪಾಟೀಲ, ಅಶೋಕ್ ಕಾತ್ರಾಳೆ ಹಾಗೂ ಸಮ್ಮೇದ ಕಾತ್ರಾಳೆ ಉಪಸ್ಥಿತರಿದ್ದು ಮಾತನಾಡಿದರು. ಚಿಕ್ಕೋಡಿಯ ಶ್ರದ್ಧಾ ಆಸ್ಪತ್ರೆಯ ಡಾ. ಸುಧೀರ್ ಪಾಟೀಲ್ ಹಾಗೂ ದಿಯಾ ಆಸ್ಪತ್ರೆಯ ಡಾ. ಸಂಧ್ಯಾ ಪಾಟೀಲ್ ಉಪಸ್ಥಿತರಿದ್ದರು.
ಶಿರಗುಪ್ಪಿ ಗ್ರಾಮದ ವೈದ್ಯರಾದ ಡಾ. ಮಹಾಧವಲ ಭೋಮಾಜ, ಡಾ. ಸುಕುಮಾರ್ ಚೌಗುಲೆ, ಡಾ. ಅಮೋಲ್ ಸರಡೆ, ಡಾ. ರಾಜೇಂದ್ರ ಅಕಿವಾಟೆ, ಡಾ. ಜಿತೇಂದ್ರ ಖೋತ್, ಡಾ. ರವಿ ಕುರಂದವಾಡೆ ಹಾಗೂ ಡಾ. ಅಶ್ವಿನಿ ಅಕಿವಾಟೆ ಅವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು ಎಂದು ತಿಳಿಸಿದ ಅವರು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸಿ.ಇ.ಒ ವಿದ್ಯಾಸಾಗರ್ ಚೌಗುಲೆ ಮಾತನಾಡಿ, “ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಜಿನ್ನಪ್ಪಾ ಚೌಗುಲೆ ಅವರು ವಿಶೇಷ ಶ್ರಮಪಟ್ಟು ಈ ಸಂಸ್ಥೆಯನ್ನು ಕಟ್ಟಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅವರ ಸಾಧನೆಗಾಗಿ ‘ಸಹಕಾರ ರತ್ನ’ ಬಿರುದು ಸಂದಿದೆ. ಅವರು ಅಗಲಿ ಹತ್ತು ವರ್ಷಗಳು ಕಳೆದಿದ್ದು, ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರತಿವರ್ಷ ಯುವಕರು, ಸಿಬ್ಬಂದಿ ಹಾಗೂ ಅಭಿಮಾನಿಗಳು ರಕ್ತದಾನದ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ. ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಗಾಯಗೊಂಡ ಸೈನಿಕರು ಹಾಗೂ ವಿವಿಧ ರೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಅಧ್ಯಕ್ಷರಾದ ಭಮ್ಮಣ್ಣಾ ಚೌಗುಲೆ ಅವರ ನೇತೃತ್ವದಲ್ಲಿ ಈ ಶಿಬಿರ ಆಯೋಜಿಸಲಾಗಿದೆ,” ಎಂದರು.
ಶಿಬಿರದಲ್ಲಿ ಭಾಗವಹಿಸಿದ ಯುವಕರು ಉತ್ಸಾಹದಿಂದ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಶಿರಗುಪ್ಪಿ ಗ್ರಾಮದಲ್ಲಿ ನಡೆದ ಈ ಶಿಬಿರದಲ್ಲಿ ಒಟ್ಟು 108 ಜನ ಯುವಕರು ರಕ್ತದಾನ ಮಾಡಿ ಸಮಾಜದಲ್ಲಿ ಸೇವಾ ಮನೋಭಾವವನ್ನು ಎತ್ತಿ ಹಿಡಿದರು.
