BELAGAVI

​ಬೆಳಗಾವಿ ಶಾಹೂ ನಗರದಲ್ಲಿ ಹೈಡ್ರಾಮಾ; ಕಾರ್ಯಾಚರಣೆ ಮಧ್ಯೆಯೇ ಸ್ಟೇ ಆರ್ಡರ್ ತಂದ ಮಾಲೀಕ, ಪಾಲಿಕೆ ಅಧಿಕಾರಿಗಳು ವಾಪಸ್!

Share

​ಬೆಳಗಾವಿ ನಗರದ ಶಾಹೂ ನಗರದಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ತಡೆಯಾಜ್ಞೆ (Stay Order) ಶಾಕ್ ನೀಡಿದೆ. ಇದರಿಂದಾಗಿ ಆರಂಭಗೊಂಡಿದ್ದ ಕಟ್ಟಡ ಉರುಳಿಸುವ ಪ್ರಕ್ರಿಯೆಯು ಅರ್ಧಕ್ಕೆ ನಿಂತಿದ್ದು, ಅಧಿಕಾರಿಗಳು ಅನಿವಾರ್ಯವಾಗಿ ಬರಿಗೈಲಿ ವಾಪಸ್ಸಾಗಿದ್ದಾರೆ.


​​ಶಾಹುನಗರದ ಜಾದವ್ ಎಂಬುವವರಿಗೆ ಸೇರಿದ ಕಟ್ಟಡವೊಂದು ಕಳೆದ ಐದು ವರ್ಷಗಳಿಂದ ಕಾನೂನು ವಿವಾದಕ್ಕೆ ಸಿಲುಕಿತ್ತು. ಪಾಲಿಕೆಯ ನಿಯಮದಂತೆ ಇದು 80 ಅಡಿ ಅಗಲದ ಯೋಜಿತ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ವಾದಿಸಿದ್ದರು. ದೀರ್ಘಕಾಲದ ಕಾನೂನು ಹೋರಾಟದ ನಂತರ, ಇತ್ತೀಚೆಗೆ ನ್ಯಾಯಾಲಯವು ಪಾಲಿಕೆಯ ಪರವಾಗಿ ತೀರ್ಪು ನೀಡಿತ್ತು.



​ನ್ಯಾಯಾಲಯದ ಆದೇಶದ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್‌ಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
​ನಾವು ಸಿಡಿಪಿ (CDP) ಯೋಜನೆಯಂತೆ 60 ಅಡಿ ರಸ್ತೆಗೆ ಜಾಗ ಬಿಟ್ಟು ಕಟ್ಟಡ ಕಟ್ಟಿದ್ದೇವೆ. ಈಗ ಪಾಲಿಕೆಯವರು ಇದು 80 ಅಡಿ ರಸ್ತೆ ಎನ್ನುತ್ತಿದ್ದಾರೆ. ಆದರೆ ಕೆಲವು ಕಡೆ ಕೇವಲ 30 ಅಡಿ ರಸ್ತೆ ಮಾತ್ರ ಇದೆ,” ಎಂದು ಜಾದವ್ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಪ್ರತಿವರ್ಷ ತಪ್ಪದೆ ಕರ ತುಂಬುತ್ತೇವೆ. ತೆರವುಗೊಳಿಸುವುದೇ ಆದ್ರೆ ಸಂಪೂರ್ಣ ಗಲ್ಲಿಯಲ್ಲಿ ಕಾರ್ಯಾಚರಣೆ ನಡೆಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ ನಗರದ ಸುಗಮ ಅಭಿವೃದ್ಧಿ ಮತ್ತು ರಸ್ತೆ ವಿಸ್ತರಣೆಗಾಗಿ ಅತಿಕ್ರಮಣ ತೆರವುಗೊಳಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

​ಜೆಸಿಬಿ ಯಂತ್ರಗಳು ಕಟ್ಟಡದ ಭಾಗವನ್ನು ಉರುಳಿಸುತ್ತಿದ್ದಂತೆಯೇ, ಜಾದವ್ ಪರ ವಕೀಲರು ಸ್ಥಳಕ್ಕೆ ಧಾವಿಸಿ ನ್ಯಾಯಾಲಯದಿಂದ ತಡೆಯಾಜ್ಞೆ (Stay Order) ತಂದಿರುವುದಾಗಿ ದಾಖಲೆಗಳನ್ನು ಪ್ರದರ್ಶಿಸಿದರು. ಇದರಿಂದಾಗಿ ಕಾನೂನುಬದ್ಧವಾಗಿ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗದ ಅಧಿಕಾರಿಗಳು, ಅರ್ಧಕ್ಕೆ ಕೆಲಸ ನಿಲ್ಲಿಸಿ ವಾಪಸ್ ತೆರಳಿದರು.

Tags:

error: Content is protected !!