ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಿದ್ಯಾರ್ಥಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕಾಯಿತು.


ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಉದ್ಯೋಗ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ, ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಹಾಗೂ ವಿದ್ಯಾರ್ಥಿ ವೇತನದ ಸಕಾಲಿಕ ವಿತರಣೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪರೀಕ್ಷಾ ಫಲಿತಾಂಶ ಮತ್ತು ಅಂಕಪಟ್ಟಿಗಳನ್ನು ವಿಳಂಬವಿಲ್ಲದೆ ನೀಡಬೇಕೆಂದು ಘೋಷಣೆಗಳನ್ನು ಕೂಗುವ ಮೂಲಕ ಶಿಕ್ಷಣ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಪ್ರತಿಭಟನೆಯ ವೇಳೆ ಚನ್ನಮ್ಮ ವೃತ್ತದ ರಸ್ತೆಯಲ್ಲೇ ಕುಳಿತು ಧರಣಿ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ಹಾಗೂ ನೂಕಾಟ-ತಳ್ಳಾಟ ಸಂಭವಿಸಿತು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಬಲವಂತವಾಗಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಇದರಿಂದಾಗಿ ಕೆಲಕಾಲ ನಗರದ ಪ್ರಮುಖ ವೃತ್ತದಲ್ಲಿ ಸಂಚಾರ ವ್ಯತ್ಯಯ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ಹೋರಾಟದಲ್ಲಿ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಚಿನ್ ಹಿರೇಮಠ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪನಿರಾಘವೇಂದ್ರ ದೇಸಾಯಿ, ರಾಜ್ಯ ಸಹಕಾರ್ಯದರ್ಶಿ ಕುಶಾಲ ಗೋಧಗೇರಿ, ರಾಜ್ಯ ಕಾರ್ಯಸಮಿತಿ ಸದಸ್ಯ ಯಲ್ಲಪ್ಪ ಬಮ್ಮನಲ್ಲಿ, ದರ್ಶನ್ ಮಾಷಣ್ಣವರ, ಶಿವಯ್ಯ ಮಠಪತಿ, ಸಾಯಿ ಬೋಸ್ಲೆ, ನಾಗರಾಜ ಹಂಜಿ, ಪ್ರಥಮಗೌಡ ಪಾಟೀಲ, ಮಹಾಂತೇಶ, ಬಾಲಾಜಿ ಜವಳಕರ ಹಾಗೂ ಸೌರಭ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
