ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿ, ಧಾರವಾಡದಲ್ಲಿ ದಲಿತ ಸಂಘಟನೆ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮೆರವಣಿಗೆ ನಡೆಸುವ ಮೂಲಕ ಕವಿವಿ ಆಡಳಿತ ಮಂಡಳಿಯ ವಿರುದ್ಧ ಘರ್ಜಸಿದ್ದರು.

ವೈ- ದಲಿತ ಸಂಘಗಳ ಸಂಸ್ಥೆಗಳ ಮಹಾಮಂಡಳ ನೇತೃತ್ವದಲ್ಲಿ ಕರ್ನಾಟ ವಿಶ್ವ ವಿದ್ಯಾಲಯದ ಮುಖ್ಯ ದ್ವಾರದಿಂದ ಕುಲಸಚಿವರ ಮುಖ್ಯ ಕಚೇರಿಯವರೆಗೆ
ಪ್ರತಿಭಟನೆ ಮೆರವಣಿಗೆ ನಡೆಸಿದ ದಲಿತ ಸಂಘಟನೆ ಮುಖಂಡರು ಹಾಗೂ ವಿದ್ಯಾರ್ಥಿಗಳು ಕವಿವಿ ಆಡಳಿತ ಮಂಡಳಿ ಸೇರಿ ಕುಲಸಚಿವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಮಾಧ್ಯಮಿಕ ಹಾಗೂ ಪ್ರಾಯೋಗಿಕ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಖಾಲಿ ಇರುವ ಹದಿಮೂರು ಶಿಕ್ಷಕರ ಹಾಗೂ ನಿಲಯ ಪಾಲಕರ ನೇಮಕಾತಿಯಲ್ಲಿ ಕವಿವಿ ಅಕ್ರಮ ನಡೆಸಿದೆ. ಜಾತಿ ಸಿಂಧುತ್ವ ಪರಿಶೀಲನೆ, ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆ ತಪಾಸಣೆ, ಪೊಲೀಸ್ ವೆರಿಫಿಕೇಶನ್ ಸೇವಾ ಅನುಭವದ ಪ್ರಮಾಣ ಪತ್ರಗಳ ತಪಾಸಣೆ ಮಾಡದೇ, ನೇಮಕಾತಿ ಆಯ್ಕೆ ಪಟ್ಟಿಯನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯದೇ, ತುರ್ತಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದ್ದು, ಈ ಆರೋಪವನ್ನು ಕುಲಪತಿಗಳು ತಳ್ಳಿ ಹಾಕಿದ್ದು, ಇನ್ನೂ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಯಾರಿಗೂ ಇದುವರೆಗೂ ಆದೇಶ ಪತ್ರವನ್ನೇ ಕೊಟ್ಟಿಲ್ಲ ಎಂದಿದ್ದಾರೆ. ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಅಂಕಗಳನ್ನು ಅದೇ ದಿನ ಪ್ರಕಟಿಸುವುದು ಉನ್ನತ ಶಿಕ್ಷಣ ಇಲಾಖೆಯ ಆದೇಶವಾಗಿರುತ್ತದೆ. ಆದರೆ, ಕುಲಪತಿಗಳು ಹಾಗೂ ಕುಲಸಚಿವರು ಈ ನಿಯಮಗಳನ್ನು ಗಾಳಿಗೆ ತೂರಿ, ಸಂದರ್ಶನದ ಅಂಕಗಳನ್ನು ಪ್ರಕಟಿಸದೇ ಅಕ್ರಮ ಎಸಗಿದ್ದು, ಈ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮತ್ತಷ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
