ಕೇಂದ್ರ ಸರ್ಕಾರದ ‘ಜಲಶಕ್ತಿ’ ಅಭಿಯಾನದಡಿ ಜಿಲ್ಲೆಯಲ್ಲಿ 1,676 ಚೆಕ್ ಡ್ಯಾಂಗಳು ಸೇರಿದಂತೆ ಒಟ್ಟು 1.1 ಲಕ್ಷ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ ಜಿಲ್ಲೆಯಾದ್ಯಂತ ‘ಮಿಷನ್ ಅಮೃತ್ ಸರೋವರ’ ಅಡಿಯಲ್ಲಿ 228 ಕೆರೆಗಳನ್ನು ಪುನಶ್ಚೇತನಗೊಳಿಸಿ ಜಲ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಂತರ್ಜಲ ಸಂಪನ್ಮೂಲಗಳ ನಿರ್ವಹಣೆ ಪ್ರಗತಿಯ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಸಿ.ಆರ್. ಪಾಟೀಲ್ ಅವರು ನೀಡಿದ ಲಿಖಿತ ಉತ್ತರದಲ್ಲಿ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳ ಸರಾಸರಿಗೆ ಹೋಲಿಸಿದರೆ, ಶೇ. 81 ರಷ್ಟು ಬಾವಿಗಳಲ್ಲಿ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಜಿಲ್ಲೆಯ ಶೇ. 97 ರಷ್ಟು ಬಾವಿಗಳಲ್ಲಿ ಕೇವಲ 0-10 ಮೀಟರ್ ಆಳದಲ್ಲಿಯೇ ನೀರು ಲಭ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಜಿಲ್ಲೆಯ ‘ಸುರಕ್ಷಿತ’ ತಾಲೂಕುಗಳ ಪ್ರಮಾಣವು 2017 ರಲ್ಲಿ ಶೇ. 40 ಇದ್ದದ್ದು 2025 ರಲ್ಲಿ ಶೇ. 53.3 ಕ್ಕೆ ಏರಿಕೆಯಾಗಿದೆ. ‘ಅತಿಯಾಗಿ ಬಳಸಲ್ಪಟ್ಟ’ ಘಟಕಗಳ ಪ್ರಮಾಣವು ಶೇ. 30 ರಿಂದ ಶೇ. 13.3 ಕ್ಕೆ ಇಳಿದಿದ್ದು, ಪ್ರಸ್ತುತ ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳು ಮಾತ್ರ ಈ ಪಟ್ಟಿಯಲ್ಲಿವೆ. ಅಟಲ್ ಭೂಜಲ ಯೋಜನೆಯಡಿ ಅಥಣಿ ಮತ್ತು ರಾಮದುರ್ಗ ತಾಲೂಕುಗಳ 45 ಗ್ರಾಮ ಪಂಚಾಯಿತಿಗಳಲ್ಲಿ 1,536 ಮರುಪೂರಣ ಘಟಕಗಳನ್ನು (ರೀಚಾರ್ಜ್ ಆಫ್ ಬೋರ್‌ವೆಲ್) ನಿರ್ಮಿಸಲಾಗಿದ್ದು, 31 ಪಂಚಾಯಿತಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಸುಧಾರಿಸಿದೆ.
ಕೇಂದ್ರ ಸರ್ಕಾರದ ‘ಪರ್ ಡ್ರಾಪ್ ಮೋರ್ ಕ್ರಾಪ್’ ಯೋಜನೆಯಡಿ ಸೂಕ್ಷ್ಮ ನೀರಾವರಿ ಅಳವಡಿಕೆಗೆ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ. ಇದರ ಜೊತೆಗೆ, ರಾಜ್ಯ ಸರ್ಕಾರದ ವಿಶೇಷ ಸುಸ್ಥಿರ ಬೆಳೆ ನಿರ್ವಹಣಾ ಯೋಜನೆಯಡಿ, ಬೆಳಗಾವಿ ಜಿಲ್ಲೆಯೊಂದರಲ್ಲೇ 1,000 ಹೆಕ್ಟೇರ್ ಕಬ್ಬು ಬೆಳೆಯುವ ಪ್ರದೇಶದಲ್ಲಿ ಹೊಸದಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ, ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.
