Belagavi

ಕಾಮಣ್ಣನ ಬೂದಿ ತೋಯಿಸಿದ ವರುಣ: ಬೆಳಗಾವಿಯಲ್ಲಿ ಸತತ ಎರಡನೇ ದಿನವೂ ಮಳೆ ಆರ್ಭಟ!

Share

• ಬೆಳಗಾವಿಯಲ್ಲಿ ಸತತ ಎರಡನೇ ದಿನ ಮಳೆ
• ಸೆಕೆ ಮತ್ತು ಬಿಸಿಲಿಗೆ ತಂಪೆರೆದ ಮಳೆರಾಯ
• ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತ
• ಮಳೆಯಿಂದ ರಕ್ಷಿಸಿಕೊಳ್ಳಲು ರೈತರ ಪರದಾಟ

ಬೆಳಗಾವಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಭಾನುವಾರ ಬೆಳಿಗ್ಗೆಯಿಂದ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಸಂಜೆಯಾಗುತ್ತಿದ್ದಂತೆ ಮಳೆರಾಯ ತಂಪೆರೆದಿದ್ದಾನೆ. ಸತತ ಎರಡನೇ ದಿನವೂ ಮಳೆ ಸುರಿಯುತ್ತಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಬೆಳಗಾವಿಯಲ್ಲಿ ಕಾಮಣ್ಣನ ಬೂದಿ ತೋಯಿಸುವಂತೆ ಮಳೆ ಸುರಿಯುತ್ತಿದ್ದು, ಎರಡು ದಿನಗಳಿಂದ ನಗರದ ವಾತಾವರಣ ಸಂಪೂರ್ಣ ಬದಲಾಗಿದೆ. ಬೆಳಿಗ್ಗೆಯಿಂದಲೇ ಸೆಕೆ ಮತ್ತು ಉರಿಬಿಸಿಲಿನಿಂದ ಬಳಲಿದ್ದ ಜನರಿಗೆ, ಸಂಜೆಯ ಹೊತ್ತಿಗೆ ಸುರಿದ ಮಳೆ ಕೊಂಚ ಆರಾಮ ನೀಡಿತಾದರೂ, ಮಳೆಯ ಅನಿರೀಕ್ಷಿತ ಆಗಮನದಿಂದ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯಾಯಿತು. ಮಳೆರಾಯನ ಆರ್ಭಟಕ್ಕೆ ನಗರದ ಅನೇಕ ಕಡೆಗಳಲ್ಲಿ ಜನರು ಆಸರೆಗಾಗಿ ಅಂಗಡಿ ಮುಂಗಟ್ಟುಗಳ ಮೊರೆ ಹೋದ ದೃಶ್ಯ ಕಂಡುಬಂದಿತು.
ಮಳೆಯ ಪ್ರಭಾವ ನೇರವಾಗಿ ಎಪಿಎಂಸಿ ಮಾರುಕಟ್ಟೆಯ ಮೇಲೆ ಬೀರಿದೆ. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರಾಟಕ್ಕೆ ತಂದಿದ್ದ ಬೆಳೆಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ರೈತರು ಮತ್ತು ವ್ಯಾಪಾರಿಗಳು ಪರದಾಡುವಂತಾಯಿತು. ಮಳೆಯ ಆಸರೆಗಾಗಿ ಮಾರುಕಟ್ಟೆಯ ಶೆಡ್‌ಗಳಲ್ಲಿ ರೈತರು ಅನಿವಾರ್ಯವಾಗಿ ನಿಂತು ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸತತ ಮಳೆಯಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.

Tags:

error: Content is protected !!