ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಮಾರ್ತಂಡ ಭೈರವ (ಮಲ್ಲಯ್ಯ) ದೇವರ ಮಂದಿರದ ಶಿಖರದ ಕಲಶ ಶಿಥಿಲಗೊಂಡಿದ್ದರಿAದ ೨೩೬ ವರ್ಷಗಳ ಬಳಿಕ ಭಕ್ತರ ಹಾಗೂ ಪವಾರ್ ದೇಸಾಯಿ ಮನೆತನದ ಪ್ರೇರಣೆಯಿಂದ ಭಾನುವಾರ ಮಧ್ಯಾಹ್ನ ಭಕ್ತಿಭಾವದಿಂದ ಕಲಶಾರೋಹಣ ನೆರವೇರಿತು.


ಮಂದಿರದ ಕಲಶದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ವಿಧಾನಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಾನುವಾರ ಮಧ್ಯಾಹ್ನ ಭಕ್ತರ ಸಮ್ಮುಖದಲ್ಲಿ ಹೊಸ ಕಲಶವನ್ನು ವಿಧಿವತ್ತಾಗಿ ಸ್ಥಾಪಿಸಿ ಕಲಶಾರೋಹಣ ನೆರವೇರಿಸಲಾಯಿತು.
ಈ ದೇವಸ್ಥಾನವು ಸುಮಾರು ೧,೨೨೮ ವರ್ಷಗಳ ಪುರಾತನ ಇತಿಹಾಸ ಹೊಂದಿದ್ದು, ಮಂಗಸೂಳಿ ಗ್ರಾಮದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಮಂದಿರದ ಟ್ರಸ್ಟಿಗಳಾದ ಉಜ್ವಲ ಸಿಂಗ್ ಪವಾರ್ ದೇಸಾಯಿ, ವಿಕ್ರಾಂತ ಸಿಂಗ್ ಪವಾರ್ ದೇಸಾಯಿ ಹಾಗೂ ಕುಟುಂಬದವರು ಎರಡು ವರ್ಷಗಳ ಹಿಂದೆಯೇ ಕಲಶ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡಿದ್ದರು.

ಭಾನುವಾರ ಬೆಳಿಗ್ಗೆಯಿಂದ ಟ್ರಸ್ಟಿಗಳಾದ ಉಜ್ವಲ್ ಸಿಂಗ್ ಪವಾರ್ ದೇಸಾಯಿ, ವಿಕ್ರಾಂತ ಸಿಂಗ್ ಪವಾರ್ ದೇಸಾಯಿ, ದಿಗ್ವಿಜಯ ಸಿಂಗ್ ಪವಾರ್ ದೇಸಾಯಿ, ಮಯೂರ್ ದೇಸಾಯಿ ಹಾಗೂ ಕುಟುಂಬದವರು ಮತ್ತು ಭಕ್ತರು ಸೇರಿ ಕಲಶಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿ ದೇವಸ್ಥಾನದ ಪ್ರದಕ್ಷಿಣೆ ನಡೆಸಿ ನಂತರ ಕಲಶಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಕೇಶ್ವರ ಕರವೀರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಮಠದ ಅಭಿನವ ಶ್ರೀ ಸಚ್ಚಿದಾನಂದ ವಿದ್ಯಾನಂದ ಭಾರತೀ ಸ್ವಾಮೀಜಿಗಳ ಸಾನಿಧ್ಯದಲ್ಲಿ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಲ್ಲಯ್ಯ ಮಂದಿರದ ಟ್ರಸ್ಟಿಗಳಾದ ಉಜ್ವಲ್ ಸಿಂಗ್ ದೇಸಾಯಿ ಹಾಗೂ ವಿಕ್ರಾಂತ್ ದೇಸಾಯಿ, ಆಗಿನ ಭಕ್ತರು “೨೩೬ ವರ್ಷಗಳ ಹಿಂದೆ ಮಂದಿರ ನಿರ್ಮಿಸಿ ಕಲಶ ಸ್ಥಾಪಿಸಲಾಗಿತ್ತು. ಈಗ ಶಿಥಿಲಗೊಂಡಿದ್ದ ಕಲಶವನ್ನು ನಮ್ಮ ಅವಧಿಯಲ್ಲಿ ಪುನಃ ಸ್ಥಾಪಿಸುವ ಅವಕಾಶ ದೊರೆತಿರುವುದು ನಮ್ಮ ಪಾಲಿಗೆ ಸೌಭಾಗ್ಯ” ಎಂದು ಹೇಳಿದರು.
ಅಭಿನವ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಮಂಗಸೂಳಿ ಗ್ರಾಮದ ಶಾಸ್ತ್ರಿಗಳಾದ ರಘುನಾಥ ಶಾಸ್ತ್ರಿ ದೇಸಿಂಗಕರ್ ಅವರು ದೇವಸ್ಥಾನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಕಲಶಾರೋಹಣ ಕಾರ್ಯಕ್ರಮದಲ್ಲೂ ಅನೇಕ ಭಕ್ತರು ಭಾಗವಹಿಸಿ ಪುಣ್ಯ ಪಡೆದರು.
ಪುರಾಣಗಳ ಪ್ರಕಾರ ಭಗವಾನ್ ಶಿವನು ಮಾರತಂಡ ಭೈರವ ರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾಗಿ ಭಕ್ತರಿಗೆ ಕೃಪೆ ತೋರಿದನೆಂಬ ನಂಬಿಕೆ ಇದೆ. ಕ್ರಿ.ಶ. ೮ನೇ ಅಥವಾ ೯ನೇ ಶತಮಾನದಿಂದ ಈ ದೇವರ ಆರಾಧನೆ ಆರಂಭಗೊAಡಿದ್ದು, ನಂತರ ದೇವಸ್ಥಾನ ನಿರ್ಮಾಣವಾಗಿ ದೊಡ್ಡ ಧಾರ್ಮಿಕ ಕೇಂದ್ರವಾಗಿ ಬೆಳೆಯಿತು. ಇತಿಹಾಸದ ವಿವಿಧ ಅವಧಿಗಳಲ್ಲಿ ರಾಷ್ಟ್ರಕೂಟರು, ಚಾಳುಕ್ಯರು ಹಾಗೂ ಮರಾಠರು ಈ ದೇವಾಲಯಕ್ಕೆ ಆಶ್ರಯ ಮತ್ತು ದೇಣಿಗೆಗಳನ್ನು ನೀಡಿದ್ದರು. ಪ್ರತಿ ವರ್ಷ ನಡೆಯುವ ಮಾಘ ಪೌರ್ಣಿಮಾ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ.
