Bagalkot

ಇಟ್ಟಿಗೆ ಭಟ್ಟಿಗಳಲ್ಲಿ ಮಕ್ಕಳ ದುಡಿಮೆ: ಬಾಗಲಕೋಟೆ ಅಧಿಕಾರಿಗಳ ಮೌನದ ಹಿಂದೇನಿದೆ?

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ನಾಗನೂರ ಗ್ರಾಮದ ಸುತ್ತಮುತ್ತ ರಾಜಾರೋಷವಾಗಿ ಅಕ್ರಮ ಇಟ್ಟಿಗೆ ಭಟ್ಟಿಗಳು ನಡೆಯುತ್ತಿದ್ದು, ಅಲ್ಲಿ ಕಂದಮ್ಮಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ಅಕ್ರಮದ ಹಿಂದೆ ಅಧಿಕಾರಿಗಳ ಕೈವಾಡವಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ಆಸುಪಾಸಿನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿಗಳ ದರ್ಬಾರ್ ಜೋರಾಗಿದೆ. ಹಾಡಹಗಲೇ ಕಾನೂನನ್ನು ಗಾಳಿಗೆ ತೂರಿರುವ ಭಟ್ಟಿ ಮಾಲೀಕರು, ಬಾಲಕಾರ್ಮಿಕರನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ವಿದ್ಯೆ ಕಲಿಯಬೇಕಾದ ಕೈಗಳು ಇಂದು ಇಟ್ಟಿಗೆ ಹೊರುವ ಕೆಲಸದಲ್ಲಿ ನಿರತವಾಗಿರುವುದು ಸಾಮಾಜಿಕ ಕಳವಳಕ್ಕೆ ಕಾರಣವಾಗಿದೆ.

ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ, ಸ್ಥಳೀಯ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ‘ಕಂಡು ಕಾಣದಂತೆ’ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳ ವರ್ತನೆ, ಇಟ್ಟಿಗೆ ಭಟ್ಟಿ ಮಾಲೀಕರಿಗೂ ಅಧಿಕಾರಿಗಳಿಗೂ ಮಧುರ ಸಂಬಂಧವಿದೆಯೇ ಅಥವಾ ಮಾಲೀಕರಿಗೆ ಕಾನೂನಿನ ಭಯವೇ ಇಲ್ಲವೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು, ಅಕ್ರಮ ಭಟ್ಟಿಗಳನ್ನು ತೆರವುಗೊಳಿಸಿ ಬಾಲಕಾರ್ಮಿಕರನ್ನು ರಕ್ಷಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Tags:

error: Content is protected !!