BELAGAVI

ಹಲಗಾ ಸರ್ವಿಸ್ ರಸ್ತೆಯಲ್ಲಿ ರಾತ್ರಿ ಬೃಹತ್ ಮರ ಬಿದ್ದು ಸಂಚಾರ ಸ್ಥಗಿತ

Share

ಬೆಳಗಾವಿಯ ಅಲಾರವಾಡ ಸೇತುವೆಯಿಂದ ಹಲಗಾ ಗ್ರಾಮಕ್ಕೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಜೆಸಿಬಿ ಹೊತ್ತೊಯ್ಯುತ್ತಿದ್ದ ಕಂಟೈನರ್ ವಾಹನಕ್ಕೆ ಬನ್ನಿ ಮರವೊಂದು ಸಿಲುಕಿ ರಸ್ತೆಗೆ ಉರುಳಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಘಟನೆ ನಡೆದು ಹಲವು ಗಂಟೆಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅಲಾರವಾಡ ಸೇತುವೆಯಿಂದ ಹಲಗಾ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿರುವ ನೀರಿನ ಫಿಲ್ಟರ್ ಘಟಕದ ಬಳಿ ಈ ಘಟನೆ ನಡೆದಿದೆ. ಜೆಸಿಬಿ ಯಂತ್ರವನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನಕ್ಕೆ ರಸ್ತೆಯ ಬದಿಯಲ್ಲಿದ್ದ ಬೃಹತ್ ಬನ್ನಿ ಮರವು ತಗುಲಿ ಕೆಳಕ್ಕೆ ಬಿದ್ದಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ಚಲಿಸುವ ಕಾರು, ಬಸ್ ಹಾಗೂ ದ್ವಿಚಕ್ರ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ. ನಿನ್ನೆ ರಾತ್ರಿ ಸಂಭವಿಸಿದ ಈ ಘಟನೆಯಿಂದಾಗಿ ಮರವು ಮತ್ತೊಂದು ಮರದ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ಕೆಳಕ್ಕೆ ಬೀಳುವ ಆತಂಕ ಎದುರಾಗಿದೆ.

ಈ ಭಾಗದಲ್ಲಿ ಈಗಾಗಲೇ ಸುಮಾರು 4 ರಿಂದ 5 ಅಪಾಯಕಾರಿ ಮರಗಳಿದ್ದು, ಹೈವೇ ಪ್ರಾಧಿಕಾರವು ಇವುಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ರಸ್ತೆಯಲ್ಲಿ ನಿರಂತರವಾಗಿ ಸಾರ್ವಜನಿಕರ ಓಡಾಟವಿರುತ್ತದೆ. ಒಂದು ವೇಳೆ ಈ ಘಟನೆ ಹಗಲಿನಲ್ಲಿ ಸಂಭವಿಸಿದ್ದರೆ ದೊಡ್ಡ ಮಟ್ಟದ ಪ್ರಾಣಾಪಾಯ ಉಂಟಾಗುತ್ತಿತ್ತು. ಇಂದು ಬೆಳಿಗ್ಗೆ 11 ಗಂಟೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವುಗೊಳಿಸಿಲ್ಲ. ತಕ್ಷಣವೇ ಈ ಅಪಾಯಕಾರಿ ಮರಗಳನ್ನು ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Tags:

error: Content is protected !!