ಬರಹಗಾರರ ಜಾತಿ, ಧರ್ಮ, ಲಿಂಗತ್ವ ತಾರತಮ್ಯಗಳನ್ನು ಮಿತಿಗಳನ್ನು ಮೀರಿ ಮನುಷ್ಯತ್ವದ ಪರವಾಗಿ ಬರೆಯಬೇಕು ಮತ್ತು ಆ ರೀತಿ ಬದುಕಬೇಕು. ಲೇಖಕ ಭ್ರಷ್ಟನಾದರೆ ಸಮಾಜವನ್ನು ಅಧಃಪತನಕ್ಕೆ ದೂಡಿದಂತೆ. ಇಂದು ಬಹುತೇಕ ಬರಹಗಾರರು ಅವಕಾಶವಾದಕ್ಕೆ ಒಳಗಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಾಮೀಪ್ಯ ಸಾಧಿಸಿದ್ದಾರೆ ಎಂದು ನಾಡಿನ ಖ್ಯಾತ ಕವಿ, ಸಾಂಸ್ಕೃತಿಕ ಚಿಂತಕ ಸತ್ಯಾನಂದ ಪಾತ್ರೋಟ ಹೇಳಿದ್ದಾರೆ.


ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಮಂಡ್ಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ, ಪ್ರಾಧ್ಯಾಪಕರಾದ ಡಾ. ವಿಷ್ಣು ಶಿಂದೆ ಅವರ “ಮಣ್ಣಿನ ಮಾಯೆ” ಕಥಾ ಸಂಕಲನ ಬೆಳಗಾವಿಯ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಇಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಸವಣ್ಣ, ಅಂಬೇಡ್ಕರ್, ಕುವೆಂಪುರಂಥವರ ಚಿಂತನೆಗಳು ಲೇಖಕರಿಗೆ ಆದರ್ಶವಾಗಬೇಕು. ಪಂಪ ರಾಜಾಶ್ರಯದಲ್ಲಿದ್ದರೂ ಪ್ರಭುತ್ವ, ಸಾಮಾಜಿಕ, ಧಾರ್ಮಿಕ ಮಿತಿಗಳನ್ನು ದಾಟಿ ಮನುಷ್ಯತ್ವದ ಪರವಾಗಿ ನಿಂತಿರುವುದು ಮಾದರಿಯಾಗಬೇಕು. ಭಾರತೀಯ ಬಹುತ್ವದೊಂದಿಗೆ ಸಮಕಾಲೀನತೆ ಮುಖಾಮುಖಿಯಾಗಿ ಬದ್ಧತೆ ಕಾಯ್ದುಕೊಳ್ಳಬೇಕು. ಕೃಷ್ಞಾ ನದಿ ತೀರದ ಬದುಕಿನ ಸಂವೇದನೆಗಳಿಂದ ಕೂಡಿದ ವಿಷ್ಣು ಶಿಂದೆ ಅವರ ಕತೆಗಳು ಬಹುತ್ವ ಸಂಸ್ಕ್ರತಿಯನ್ನು ಪ್ರತಿಪಾದಿಸುತ್ತವೆ ಎಂದು ವಿಶ್ಲೇಷಿಸಿದರು.

ಲೇಖಕರು ಇಂದು ಪ್ರಶಸ್ತಿ, ಪ್ರಚಾರಕ್ಕೆ, ಅಧಿಕಾರದ ಲಾಲಸೆಗೆ ಗಂಟು ಬಿದ್ದು, ಅವಕಾಶವಾದದ ಒಳ ಮತ್ತು ಹೊರ ಒಪ್ಪಂದ ಮೂಲಕ ಒಬ್ಬರಿಗೊಬ್ಬರು ಪರಸ್ಪರ ಪೂರವಾಗಿ ಬರೆಯುತ್ತಿದ್ದಾರೆ. ಇಂಥವರ ಬರಹ ಸಾಮಾಜಿಕವಾಗಿ ಯಾವುದಕ್ಕೂ ಉಪಯೋಗವಾಗುದಿಲ್ಲ ಮತ್ತು ಅಂಥ ಸಾಹಿತ್ಯಕ್ಕೆ ಯಾವುದೇ ಬೆಲೆಯಿಲ್ಲ. ಬರಹಗಾರರಿಗೆ ಸಾಮಾಜಿಕ ಬದ್ಧತೆ ಅತೀ ಮುಖ್ಯ ಎಂದು ತಿಳಿಸಿದರು.
ಯುವ ಧುರೀಣ, ರಾಯಣ್ಣ ಗೋಗ್ರೀನ್ ಫೌಂಡೇಶನ್ ಅಧ್ಯಕ್ಷ ಸದಾಶಿವ ದೇಶಿಂಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ರಾಯಬಾಗ ಸೇರಿದಂತೆ ಕನ್ನಡ ಪ್ರಾದೇಶಿಕ ಭಾಷಾ ಸೊಗಡಿನಲ್ಲಿ ಬರಹಗಾರರು ಸೃಜನಶೀಲ ಕೃತಿಗಳನ್ನು ನೀಡಿದರೆ ಸಾಹಿತ್ಯಕ್ಕೆ ಗುರುತರ ಕೊಡುಗೆಯಾಗುತ್ತದೆ ಎಂದು ತಿಳಿಸಿದರು.
ಕತೆಗಾರ, ವಿಮರ್ಶಕ ಲಿಂಗರಾಜ ಸೊಟ್ಟಪ್ಪನವರ್ ಕೃತಿ ಕುರಿತು ಮಾತನಾಡಿದರು. ಲೇಖಕ ವಿಷ್ಣು ಶಿಂದೆ ಮಾತನಾಡಿ, ಮಣ್ಣಿನ ಮಾಯೆ ಕೃಷ್ಣಾ ನದಿ ತೀರದ ಸಂವೇದನೆ ಒಳಗೊಂಡಿದ್ದು, ಇಲ್ಲಿಯ ಕತೆಗಳು ವೈಯಕ್ತಿಕವಾಗಿ ತುಂಬಾ ಖುಷಿ ನೀಡಿವೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ, ಡಾ. ಯಲ್ಲಪ್ಪ ಹಿಮ್ಮಡಿ ಅವರು, ನಿರಂತರ ಅಧ್ಯಯನ ಹಾಗೂ ವಾಸ್ತವ ಜಗತ್ತಿನ ಸೂಕ್ಷ್ಮ ನಿರೀಕ್ಷಿಸಿ ಸಂವೇದನಾಶೀಲ ಕೃತಿಗಳ ರಚನೆಗೆ ಮುಂದಾಗಬೇಕು. ಈ ದೃಷ್ಟಿಯಿಂದ ವಿಷ್ಣು ಶಿಂದೆ ಒಬ್ಬ ಗಮನಾರ್ಹ ಲೇಖಕರಾಗಿ ಗಮನ ಸೆಳೆಯುತ್ತಾರೆ ಎಂದು ಹೇಳಿದರು.
ಕೃಷ್ಣಾ ಘೋರ್ಪಡೆ, ಡಾ. ಸಿದ್ಧಗಂಗಮ್ಮ, ಡಾ.ರಾಮಕೃಷ್ಣ ಮರಾಠೆ, ಡಾ. ಕೆ. ಎನ್. ದೊಡ್ಡಮನಿ, ಪ್ರೊ. ಮಾರುತಿ ಬುದ್ಯಾಳ, ಪ್ರೊ. ಹೊಸಳ್ಳಿ, ರವಿ ಕೋಟಾರಗಸ್ತಿ, ರಮಾನಾಥ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ಶಶಿಕಾಂತ ತಾರದಾಳೆ ಪರಿಚಯಿಸಿ ಸ್ವಾಗತಿಸಿದರು. ಡಾ. ಜಗನಾಥ ಗೆನೆಣ್ಣವರ ಕಾರ್ಯಕ್ರಮ ನಿರೂಪಿಸಿದರು.
