ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು, ನಂದಿಹಳ್ಳಿಯ ಪ್ರಮುಖ ನಾಯಕ ಮಾರುತಿ ಲೋಕೂರ್ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ರಾಜಹಂಸಗಡದ ಹಿರಿಯ ಮುಖಂಡರು ಸಹ ಇಂದು ಅಧಿಕೃತವಾಗಿ ಕಾಂಗ್ರೆಸ್ ಧ್ವಜ ಹಿಡಿದರು.


ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರುತಿ ಲೋಕೂರ್, ಸಿದ್ಧಪ್ಪ ಗಣಪತ ಪವಾರ್, ಲಕ್ಷ್ಮಣ ಸಿದ್ಧಪ್ಪ ತೋರ್ವತ್, ರುಕ್ಮಣ್ಣ ಸಿದ್ಧಪ್ಪ ಹವಳ ಮೊದಲಾದವರು ಕಾಂಗ್ರೆಸ್ ಪಕ್ಷ ಸೇರಿದರು. ಇವರಿಗೆ ಕಾಂಗ್ರೆಸ್ ಶಾಲು ಹಾಕಿ ಸಚಿವರು ಸ್ವಾಗತಿಸಿದರು.
ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಲಕ್ಷ್ಮೀ ಹೆಬ್ಬಾಳಕರ್ ಅವರ ಕೈ ಬಸಪಡಿಸಬೇಕೆನ್ನುವ ಉದ್ಧೇಶದಿಂದ ಕಾಂಗ್ರೆಸ್ ಸೇರಿದ್ದಾಗಿ ಅವರು ತಿಳಿಸಿದರು. ಗ್ರಾಮೀಣ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಇನ್ನೂ ಹಲವರು ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಕಾಡಾ ಅಧ್ಯಕ್ಷ ಯುವರಾಜ ಕದಂ, ಉಚಗಾಂವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಶಂಕರಗೌಡ ಪಾಟೀಲ, ಮನೋಹರ ಬೆಳಗಾಂವಕರ್, ಗಾಯತ್ರಿ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಇದ್ದರು.
