ವಿಜಯಪುರ ಜಿಲ್ಲೆಯ ಮಹತ್ವಾಕಾಂಕ್ಷಿ ನೀರಾವರಿ ಯೋಜನೆ ತುಬಚಿ–ಬಬಲೇಶ್ವರ ಯೋಜನೆಯಡಿ ಬಾಬಾನಗರದಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒಪ್ಪಿಗೆ ದೊರೆತ ಹಿನ್ನೆಲೆ, ತಿಕೋಟಾದ ರೈತರು ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಂಡು ರೈತರು ನೀಡಿದ ಸನ್ಮಾನವನ್ನು ಸ್ವೀಕರಿಸಿದರು ರೈತರು ಹೃದಯಪೂರ್ವಕವಾಗಿ ವ್ಯಕ್ತಪಡಿಸಿದ ಕೃತಜ್ಞತೆ, ಅವರ ಕಣ್ಣಲ್ಲಿ ಕಾಣಿಸಿದ ಆಶಾಭಾವನೆ ಹಾಗೂ ನಾಳೆಯ ಹಸಿರು ಭವಿಷ್ಯದ ಕನಸು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಈ ಯೋಜನೆ ಒಂದು ಅಣೆಕಟ್ಟಿನ ನಿರ್ಮಾಣವಲ್ಲ; ಅದು ರೈತರ ಬದುಕಿಗೆ ನೀರಿನ ನಂಬಿಕೆ ನೀಡುವ ಸಂಕಲ್ಪದ ಹೆಜ್ಜೆ ಎಂದು ಸಚಿವರು ಭರವಸೆ ನೀಡಿದರು.


ಇನ್ನೂ ತಿಕೋಟಾ ಹಾಗೂ ಸುತ್ತಮುತ್ತಲಿನ ಭಾಗದ ರೈತರ ಭೂಮಿಗೆ ನೀರು ತಲುಪಿಸಿ, ಅವರ ಪರಿಶ್ರಮಕ್ಕೆ ಬೆಲೆ ಸಿಗುವಂತೆ ಮಾಡುವ ಕಾರ್ಯದಲ್ಲಿ ಅವರ ಪ್ರೀತಿ ಮತ್ತು ಅಭಿಮಾನವೇ ನನ್ನ ಶಕ್ತಿ ಎಂದರು ಬಾಬಾನಗರದ ಬಳಿ ಸುಮಾರು 530 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಅಣೆಕಟ್ಟು ನಿರ್ಮಾಣದ ಮೂಲಕ ಮಳೆಗಾಲದಲ್ಲಿ ಸುಮಾರು 1ಟಿಎಂಸಿ ನೀರು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಬಳಸಿಕೊಳ್ಳುವ ಈ ಯೋಜನೆ ಬಬಲೇಶ್ವರ ಕ್ಷೇತ್ರದ ಚಿತ್ರಣವನ್ನೇ ಬದಲಿಸಲಿದೆ. ಜಲಸಮೃದ್ಧಿಯಾಗಿ ಅಂತರಜಲ ವೃದ್ಧಿಯೊಂದಿಗೆ ಈ ಭಾಗ ಮತ್ತಷ್ಟು ಹಸಿರಾಗಲಿದೆ ಎಂದರು. ಈ ಸಂದರ್ಭದಲ್ಲಿ ಸೋಮದೇವರಹಟ್ಟಿ ದುರ್ಗಾದೇವಿ ದೇವಸ್ಥಾನದ ಜಗನು ಮಹಾರಾಜ, ರೈತ ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಅರ್ಜುನ ಹೀರು ರಾಠೋಡ, ರಾಮನಿಂಗ ಮಸಳಿ, ರಾಮಣ್ಣ ಮೆಡೆಗಾರ, ಆರ್. ಜಿ. ಯರನಾಳ, ಎಂ. ಎಸ್. ಲೋಣಿ, ಈರನಗೌಡ ರುದ್ರಗೌಡರ, ಡಿ. ಎಲ್. ಚವ್ಹಾಣ, ಯಾಕೂಬ ಜತ್ತಿ, ತಿಕೋಟಾ ಭಾಗದ ಪ್ರಭಾವಿ ಯುವ ಧುರೀಣೆ ಶ್ರೀಮತಿ ಭಾಗೀರಥಿ ತೇಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

