BELAGAVI

ಬೆಳಗಾವಿಯಲ್ಲಿ ನೀರಿಗಾಗಿ ಪರದಾಟ: ವಡಗಾಂವ ರೈತ ಗಲ್ಲಿಯ ನಿವಾಸಿಗಳಿಂದ ಖಾಲಿ ಕೊಡ ಹಿಡಿದು ರಸ್ತೆಗಿಳಿದು ಪ್ರತಿಭಟನೆ!

Share

ಬೇಸಿಗೆ ಆರಂಭಕ್ಕೂ ಮುನ್ನವೇ ಬೆಳಗಾವಿ ನಗರದ ವಡಗಾಂವ ರೈತ ಗಲ್ಲಿಯಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ನಿವಾಸಿಗಳು ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಬೇಸಿಗೆ ಆರಂಭದ ಹೊಸ್ತಿಲಲ್ಲೇ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ವಡಗಾಂವ ರೈತ ಗಲ್ಲಿಯ ನಿವಾಸಿಗಳು ಶನಿವಾರ ಬೆಳ್ಳಂ ಬೆಳಗ್ಗೆ ಖಾಲಿ ಕೊಡಗಳನ್ನು ಹಿಡಿದು ಎಲ್ ಆ್ಯಂಡ್ ಟಿ ಹಾಗೂ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ರೈತಗಲ್ಲಿಯಲ್ಲಿ ನೀರಿನ ಸಮಸ್ಯೆ ತಲೆದೋರಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸಮಸ್ಯೆಯನ್ನು ಪಾಲಿಕೆ ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದರು.

ವಡಗಾಂವ ರೈತ ಗಲ್ಲಿ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನಿವಾಸಿಗಳ ಆರೋಪದ ಪ್ರಕಾರ ಮನೆಗಳಿಗೆ ಬರುತ್ತಿರುವ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಜನರು ಆ ನೀರನ್ನು ಬಳಸಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಕಳೆದ ಇಪ್ಪತ್ತು ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಈವರೆಗೂ ಸಮಸ್ಯೆ ಪರಿಹರಿಸುವ ಕೆಲಸ ಮಾಡಿಲ್ಲ. ಕೂಡಲೇ ನಮಗೆ ಸಮಸ್ಯೆ ಬಗೆಹರಿಸಬೇಕು ಇಲ್ಲಿನ ರಹವಾಸಿಗಳು ಆಗ್ರಹಿಸಿದ್ದಾರೆ.

ಬೇರೆ ಗಲ್ಲಿಯಲ್ಲಿ ಎರಡೇರಡು ಬೋರವೆಲ್ ಗಳು ಇವೆ. ರೈತಗಲ್ಲಿಯಲ್ಲಿದ್ದ ಒಂದೇ ಒಂದು ಬೋರವೆಲ್ ಸಂಪೂರ್ಣ ಹದಗೆಟ್ಟಿದೆ. ಇರುವ ಒಂದು ಭಾವಿಯಲ್ಲಿಯೂ ಒಳಚರಂಡಿ ನೀರು ಮಿಶ್ರಿತವಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.

Tags:

error: Content is protected !!