Kagawad

ಕಾಗವಾಡ ತಾಲೂಕಿನ ಶ್ರೀ ಕ್ಷೇತ್ರ ಮಂಗಸೂಳಿ ಮಲ್ಲಯ್ಯ ದೇವಸ್ಥಾನದಲ್ಲಿ 236 ವರ್ಷಗಳ ಬಳಿಕ ಕಳಶಾರೋಹಣ

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಮಾರ್ತಂಡ ಭೈರವ (ಮಲ್ಲಯ್ಯ) ದೇವಸ್ಥಾನವು ಸುಮಾರು 1,228 ವರ್ಷಗಳ ಪುರಾತನ ಇತಿಹಾಸ ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಮಂದಿರಕ್ಕೆ ಕಳಶ ಸ್ಥಾಪಿಸಲಾಗಿತ್ತು, ಅದಾಗಿ ಈಗ 236 ವರ್ಷಗಳು ಗತಿಸಿವೆ. ಹಳೆಯ ಕಳಶವು ಶಿಥಿಲಗೊಂಡಿದ್ದರಿಂದ, ದೇವಸ್ಥಾನದ ಟ್ರಸ್ಟಿಗಳಾದ ದೇಸಾಯಿ ಕುಟುಂಬದವರು ಹಾಗೂ ಭಕ್ತರು ಹೊಸ ಕಳಶವನ್ನು ಸ್ಥಾಪಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ, ಶುಕ್ರವಾರದಂದು ಹೊಸ ಕಳಶದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಬೆಳಿಗ್ಗೆ ಮಂಗಸೂಳಿ ಗ್ರಾಮದ ಪ್ರಮುಖ ಮಾರ್ಗಗಳಲ್ಲಿ ಪ್ರಾರಂಭವಾದ ಈ ಮೆರವಣಿಗೆಗೆ ಮಂದಿರದ ಟ್ರಸ್ಟಿಗಳಾದ ಉಜ್ವಲ್ ಸಿಂಗ್ ಪವಾರ್ ದೇಸಾಯಿ, ವಿಕ್ರಾಂತ ಸಿಂಗ್ ಪವಾರ್ ದೇಸಾಯಿ, ದಿಗ್ವಿಜಯ ಸಿಂಗ್ ಪವಾರ್ ದೇಸಾಯಿ, ಮಯೂರ್ ದೇಸಾಯಿ ಹಾಗೂ ಅವರ ಕುಟುಂಬದವರು ನೇತೃತ್ವ ವಹಿಸಿದ್ದರು. ಭಕ್ತರು ಮತ್ತು ಸುಮಂಗಲಿಯರು ಜಲಕಲಶಗಳನ್ನು ಹೊತ್ತು, ವಾದ್ಯಮೇಳಗಳೊಂದಿಗೆ ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಂತರ, ಸಂಕೇಶ್ವರ ಕರವೀರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಮಠದ ಅಭಿನವ ಶ್ರೀ ಸಚ್ಚಿದಾನಂದ ವಿದ್ಯಾ ನೃಸಿಂಹ ಭಾರತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ, ವಿಧಿ-ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಕಳಶವನ್ನು ದೇವಸ್ಥಾನದಲ್ಲಿ ಇರಿಸಲಾಯಿತು.
ಈ ಕಳಶದ ಬಗ್ಗೆ ಮಾಹಿತಿ ನೀಡಿದ ಮಂದಿರದ ಮುಖ್ಯಸ್ಥರಾದ ವಿಕ್ರಾಂತ ಸಿಂಗ್ ದೇಸಾಯಿ ಹಾಗೂ ದಿಗ್ವಿಜಯ ದೇಸಾಯಿ ಅವರು, “ಮಂಡ್ಯ ಜಿಲ್ಲೆಯ ಮುನಿಸ್ವಾಮಿ ಭೂತಯನಹೊಸೂರಿನಲ್ಲಿ 15 ಕೆಜಿ ತೂಕದ ಪಂಚಲೋಹದ ನಾಲ್ಕುವರೆ ಅಡಿ ಎತ್ತರದ ಕಳಶವನ್ನು ನಿರ್ಮಿಸಲಾಗಿದ್ದು, ಅದಕ್ಕೆ 20 ಗ್ರಾಂ ಚಿನ್ನದ ಲೇಪನ ಮಾಡಲಾಗಿದೆ” ಎಂದು ತಿಳಿಸಿದರು.

ನಾಳೆ ಶನಿವಾರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹೋಮ-ಹವನಾದಿ ಕಾರ್ಯಕ್ರಮಗಳು ಜರುಗಲಿದ್ದು, ಭಾನುವಾರ ಬೆಳಿಗ್ಗೆ 11:30ರ ಶುಭ ಮುಹೂರ್ತದಲ್ಲಿ ಕಳಶಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದು ಮಂದಿರದ ಪ್ರಮುಖರು ತಿಳಿಸಿದ್ದಾರೆ.
ಅಭಿನವ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಮಂಗಸೂಳಿ ಗ್ರಾಮದ ಶಾಸ್ತ್ರಿಗಳಾದ ರಘುನಾಥ ಶಾಸ್ತ್ರಿ ದೇಸಿಂಗಕರ್ ಅವರು ದೇವಸ್ಥಾನದ ಹಿರಿಮೆಯ ಕುರಿತು ಮಾತನಾಡಿದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಪುರಾಣಗಳ ಪ್ರಕಾರ, ಭಗವಾನ್ ಶಿವನು ಮಾರ್ತಂಡ ಭೈರವ ರೂಪದಲ್ಲಿ ಇಲ್ಲಿ ಪ್ರತ್ಯಕ್ಷನಾಗಿ ಭಕ್ತರಿಗೆ ಕೃಪೆ ತೋರಿದನೆಂಬ ನಂಬಿಕೆ ಇದೆ. ಕ್ರಿ.ಶ. 8ನೇ ಅಥವಾ 9ನೇ ಶತಮಾನದಲ್ಲಿ ಇಲ್ಲಿ ದೇವರ ಆರಾಧನೆ ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ರಾಷ್ಟ್ರಕೂಟರು, ಚಾಳುಕ್ಯರು ಹಾಗೂ ಮರಾಠ ರಾಜವಂಶಗಳು ಈ ದೇವಾಲಯಕ್ಕೆ ಆಶ್ರಯ ಮತ್ತು ದೇಣಿಗೆಗಳನ್ನು ನೀಡಿದ್ದವು. ಪ್ರತಿ ವರ್ಷ ನಡೆಯುವ ಮಾಘ ಪೌರ್ಣಿಮೆಯ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಸೇರಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ. ಶತಮಾನಗಳಿಂದಲೂ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಈ ದೇವಸ್ಥಾನವನ್ನು ಪ್ರಸ್ತುತ ದೇಸಾಯಿ ಕುಟುಂಬದವರು ಟ್ರಸ್ಟಿಗಳಾಗಿ ಮುನ್ನಡೆಸುತ್ತಿದ್ದಾರೆ.
ಕಳಶ ಮೆರವಣಿಗೆಯಲ್ಲಿ ಅನೇಕ ಭಕ್ತರು ಭಾಗವಹಿಸಿ ಪುನೀತರಾದರು.

Tags:

error: Content is protected !!