State

ಸಿಲಿಂಡರ್ ಅಭಾವದ ನಡುವೆ ಹೊಟೇಲ್ ಮಾಲೀಕರಿಗೆ ಎಲೆಕ್ಟ್ರಿಕ್ ಸ್ಟೌವ್ ಬಳಸಲು ಸಲಹೆ

Share

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್‌ಗಳ ತೀವ್ರ ಅಭಾವ ಎದುರಾಗಿದ್ದು, ಹೋಟೆಲ್ ಉದ್ಯಮ, ದೇವಸ್ಥಾನಗಳ ಪ್ರಸಾದ ವ್ಯವಸ್ಥೆ ಹಾಗೂ ವಸತಿ ನಿಲಯಗಳಿಗೆ ಸಂಕಷ್ಟ ಎದುರಾಗಿದೆ. ಈ ಕುರಿತು ಇಂದು ವಿಧಾನ ಪರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಗಂಭೀರ ಚರ್ಚೆ ನಡೆಸಿದರು. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಇದಕ್ಕೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ನೀಡಿದ ಭರವಸೆ ಏನು? ಬನ್ನಿ ನೋಡಿಕೊಂಡು ಬರೋಣ.

ವಿಧಾನ ಪರಿಷತ್ ಸದನದಲ್ಲಿ ಸದಸ್ಯ ಐವಾನ್ ಡಿಸೋಜಾ ಅವರು ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್’ಗಳ ಪೂರೈಕೆ ಕೊರತೆ ಹಿನ್ನೆಲೆ ಹಲವಾರು ಹೊಟೇಲ್ ಉದ್ಯೋಗಗಳು ಸದ್ಯ ಸ್ಥಗಿತಗೊಂಡಿವೆ. ಹಲವು ದೇವಸ್ಥಾನಗಳಲ್ಲಿ ಪ್ರಸಾದ ವ್ಯವಸ್ಥೆ ಕೂಡ ಬಂದ್ ಆಗಿದೆ. ಕಟ್ಟಿಗೆ ವ್ಯಾಪಾರಿಗಳು ಮನಸ್ಸಿಗೆ ಬಂದಂತೆ ಹಣ ಪಡೆಯುತ್ತಿದ್ದಾರೆ. ಆಟೋಗಳಿಗೆ ಗ್ಯಾಸ್ ಸಿಗದೇ ಹಲವು ನಿರುದ್ಯೋಗಿಗಳಾಗುತ್ತಿದ್ದಾರೆ. ಶೇ. 55 ರಷ್ಟು ತೆರಿಗೆ ರಾಜ್ಯ ಸರ್ಕಾರ ಪಡೆಯುತ್ತಿದೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂದೇಶಗಳು ಹರಿದಾಡುತ್ತಿವೆ. ಈ ಕುರಿತು ತನಿಖೆ ನಡೆಸಬೇಕು. ವಿದ್ಯಾರ್ಥಿ ವಸತಿ ನಿಲಯಗಳಿಗೆ ರಜೆ ಘೋಷಿಸಿ ಬದಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಸದಸ್ಯ ನಾಗರಾಜು ಎಂ. ಅವರು ಮಧ್ಯಪ್ರಾಚ್ಯ ದೇಶದ ಯುದ್ಧದ ಹಿನ್ನೆಲೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ. ದೇಶದ ಹಲವಾರು ಹೋಟೆಲ್’ಗಳು ಬಂದ್ ಆಗಿವೆ. ದೇವಸ್ಥಾನಗಳ ಪ್ರಸಾದಕ್ಕೂ ಸಂಚಕಾರ ಎದುರಾಗಿದ್ದು, ಹಲವಾರು ಮದುವೆಗಳು ಮುಂದೂಡಿಕೆಯಾಗಿವೆ. ಜನರು ಇಂದಿರಾ ಕ್ಯಾಂಟಿನ್ ಮತ್ತು ಹೊಟೇಲ್’ಗಳ ಮೇಲೆ ಜನರು ಅವಲಂಬಿತರಾಗಿದ್ದಾರೆ. ಎಲ್.ಪಿ.ಜಿ ಕಾಳಸಂತೆಯನ್ನು ತಡೆಗಟ್ಟಬೇಕು. ವಾಣಿಜ್ಯ ಸಿಲಿಂಡರ್’ಗಳ ವ್ಯತ್ಯಯವಾಗದಂತೆ ರಾಜ್ಯ ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಇಂದು ಮತ್ತೇ ಇಂಧನ ಕಂಪನಿಗಳ ಸಭೆಯನ್ನು ಕರೆದು ಚರ್ಚಿಸಲಾಗಿದೆ. ಆಹಾರ ಉತ್ಪನ್ನ ಸಂಸ್ಥೆಗಳು, ವಿದ್ಯಾರ್ಥಿ ವಸತಿ ನಿಲಯ, ಆಸ್ಪತ್ರೆ, ವಸತಿ ಶಾಲೆಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಆವಶ್ಯಕತೆಯಿದ್ದಲ್ಲಿ ವಾಣಿಜ್ಯ ಸಿಲಿಂಡರ್ ವಿತರಿಸಲಾಗುತ್ತಿದೆ. ಒಂದು ವಾರದ ಬಳಿಕ ವಾತಾವರಣ ಬದಲಾಗಲಿದೆ. ಈಗಾಗಲೇ ಹೊಟೇಲ್ ನವರಿಗೆ ಒಂದು ವಾರದ ವರೆಗೆ ಇಲೆಕ್ಟ್ರಿಕ್ ಸ್ಟೋವ್ ಬಳಸಲು ಸೂಚಿಸಲಾಗಿದೆ. ವಾರದೊಳಗೆ ಸಮಸ್ಯೆ ಪರಿಹಾರವಾಗುವ ಸೂಚನೆ ದೊರೆತಿದೆ. ಈಗ 2 ಹಡಗು ರಾಜ್ಯಕ್ಕೆ ಬರುತ್ತಿದೆ ಎಂದರು.

Tags:

error: Content is protected !!