Bagalkot

ಬಾಗಲಕೋಟೆ ಬೆಳೆ ವಿಮೆ ಹೆಸರಲ್ಲಿ 30 ಕೋಟಿ ರೂ. ಬೃಹತ್ ವಂಚನೆ; 11 ಮಂದಿ ವಿರುದ್ಧ ಕೇಸ್ ದಾಖಲು

Share

ರೈತರ ಹೆಸರಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣಕ್ಕೆ ಕನ್ನ ಹಾಕಿದ ಬೃಹತ್ ಜಾಲವೊಂದು ಬಾಗಲಕೋಟೆ ಜಿಲ್ಲೆಯಲ್ಲಿ ಬಯಲಾಗಿದೆ. ಬೆಳೆ ಬೆಳೆಯದಿದ್ದರೂ ಬೆಳೆದಿದ್ದೇವೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬರೋಬ್ಬರಿ 30 ಕೋಟಿ ರೂಪಾಯಿ ಲೂಟಿ ಮಾಡಿದ ಪ್ರಕರಣ ಈಗ ಮುಧೋಳ ಠಾಣೆ ಮೆಟ್ಟಿಲೇರಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಬೆಳೆ ವಿಮೆ ಹೆಸರಿನಲ್ಲಿ ನಡೆದ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಸದ್ಯ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೆಲವು ಪ್ರಭಾವಿಗಳು ವಿಮಾ ಕಂಪನಿಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಸರ್ಕಾರಕ್ಕೆ ಬರೋಬ್ಬರಿ 30,28,51,580 ರೂಪಾಯಿ ಪಂಗನಾಮ ಹಾಕಿದ್ದಾರೆ. ಮುಧೋಳ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡಮನಿ ಅವರು ನೀಡಿದ ದೂರಿನನ್ವಯ, ಮೆಟಗುಡ್ಡ ಗ್ರಾಮದ ಏಳು ಮಂದಿ ಹಾಗೂ ಯುನಿವರ್ಸಲ್ ಸೋಂಪು ಇನ್ಸುರೆನ್ಸ್ ಕಂಪನಿಯ ನಾಲ್ವರು ಉದ್ಯೋಗಿಗಳು ಸೇರಿದಂತೆ ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ವಂಚಕ ಜಾಲವು 2020-21 ರಿಂದ ನಿರಂತರವಾಗಿ ಈ ಕೃತ್ಯ ಎಸಗುತ್ತಾ ಬಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ವಾಸ್ತವವಾಗಿ ಬೆಳೆ ಬೆಳೆಯದಿದ್ದರೂ ಅಥವಾ ಅತ್ಯಲ್ಪ ಪ್ರದೇಶದಲ್ಲಿ ಬೆಳೆ ಬೆಳೆದಿದ್ದರೂ, ದಾಖಲೆಗಳಲ್ಲಿ ಹೆಚ್ಚಿನ ವಿಸ್ತೀರ್ಣವನ್ನು ತೋರಿಸುವ ಮೂಲಕ ವಿಮಾ ಹಣವನ್ನು ಲಪಟಾಯಿಸಲಾಗಿದೆ. ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಶಿಕಟ್ಟಿ, ಶ್ರೀನಿವಾಸ ಪಾಟೀಲ, ಕಲ್ಮೇಶ ಜುನ್ನೂರ ಸೇರಿದಂತೆ ಏಳು ಮಂದಿ ಸ್ಥಳೀಯರು ಹಾಗೂ ಇನ್ಸುರೆನ್ಸ್ ಕಂಪನಿಯ ಯಶವಂತ, ರಾಕೇಶ, ಪ್ರಕಾಶ ಮತ್ತು ಅನೀಲ ಎಂಬುವವರು ಈ ವಂಚನೆಯ ಸೂತ್ರಧಾರಿಗಳಾಗಿದ್ದಾರೆ. ಈ ವರ್ಷವೊಂದರಲ್ಲೇ ಸುಮಾರು 28.51 ಲಕ್ಷ ರೂಪಾಯಿಗಳಷ್ಟು ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ವಿಮಾ ಕಂಪನಿಯ ಸಿಬ್ಬಂದಿಗಳ ಪಾರದರ್ಶಕತೆಯ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಈ ಜಾಲವು, ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ. ಸದ್ಯ ಮುಧೋಳ ಪೊಲೀಸರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರಭಾವಿಗಳ ಶಾಮೀಲಾಗುವಿಕೆ ಮತ್ತು ವ್ಯವಸ್ಥಿತವಾಗಿ ನಡೆದಿರುವ ಈ ಹಗರಣದ ಹಿಂದೆ ಇನ್ನೂ ದೊಡ್ಡ ಮಟ್ಟದ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕುಗೊಂಡಿದೆ.

Tags:

error: Content is protected !!