Chikkodi

40 ವಿದ್ಯಾರ್ಥಿಗಳಿಗೆ 1 ಕೋಟಿ ರೂ ಶಶಿಕಲಾ ಜೊಲ್ಲೆ ವಿದ್ಯಾರ್ಥಿವೇತನ – ಬಸವಪ್ರಸಾದ ಜೊಲ್ಲೆ ಪರೀಕ್ಷಾ ಫಲಿತಾಂಶ ಪ್ರಕಟ

Share

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕು ಎಂಬ ಉದ್ದೇಶದಿಂದ, ಜೊಲ್ಲೆ ಶಿಕ್ಷಣ ಸಂಸ್ಥೆಯ ಅಣ್ಣಾಸಾಹೇಬ್ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಕಾಲೇಜು, ನಿಪ್ಪಾಣಿ ವತಿಯಿಂದ ನಡೆಸಿದ ‘ಶಶಿಕಲಾ ಜೊಲ್ಲೆ ವಿದ್ಯಾರ್ಥಿವೇತನ’ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ತಿಳಿಸಿದರು.

ನಿಪ್ಪಾಣಿಯ ಜೊಲ್ಲೆ ಶಿಕ್ಷಣ ಸಂಸ್ಥೆಯ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದ್ಯಾರ್ಥಿವೇತನದ ಒಟ್ಟು ಮೊತ್ತ 1 ಕೋಟಿ ರೂ.ಗಳಾಗಿದ್ದು, ವೈದ್ಯಕೀಯ (ನೀಟ್) ಹಾಗೂ ಎಂಜಿನಿಯರಿಂಗ್ (ಜೆಇಇ) ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ 20 ವಿದ್ಯಾರ್ಥಿಗಳಿಗೆ 64 ಲಕ್ಷ ರೂ.ಗಳ ವಿದ್ಯಾರ್ಥಿವೇತನ ನೀಡಲಾಗಿತ್ತು. ಈ ವರ್ಷ ಅದನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಒಟ್ಟು 40 ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಅನ್ವಯವಾಗಲಿದೆ. ಇದನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ 10 ವಿದ್ಯಾರ್ಥಿಗಳಿಗೆ ಶೇ.100 ಶುಲ್ಕ ವಿನಾಯಿತಿ, 11ರಿಂದ 20ನೇ ಶ್ರೇಯಾಂಕದವರಿಗೆ ಶೇ.75, 21ರಿಂದ 30ನೇ ಶ್ರೇಯಾಂಕದವರಿಗೆ ಶೇ.50 ಹಾಗೂ 31ರಿಂದ 40ನೇ ಶ್ರೇಯಾಂಕದವರಿಗೆ ಶೇ.25 ಶುಲ್ಕ ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.

ಕಳೆದ ಜನವರಿ 4ರಂದು ಶೈಕ್ಷಣಿಕ ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಮೊದಲ 10 ಮಂದಿಗೆ ಶೇ.100 ರಷ್ಟು ಅಂದರೆ ಎರಡು ವರ್ಷಗಳಲ್ಲಿ ಒಟ್ಟು 4 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
11ರಿಂದ 20ನೇ ಶ್ರೇಯಾಂಕದವರಿಗೆ ಶೇ.75 ರಷ್ಟು ಅಂದರೆ ಮೊದಲ ವರ್ಷ 1.50 ಲಕ್ಷ ರೂ. ಹಾಗೂ ಎರಡನೇ ವರ್ಷ 50 ಸಾವಿರ ರೂ. ವಿದ್ಯಾರ್ಥಿವೇತನ ದೊರೆಯಲಿದೆ.

21ರಿಂದ 30ನೇ ಶ್ರೇಯಾಂಕದವರಿಗೆ ಶೇ.50 ರಷ್ಟು ಅಂದರೆ ಎರಡು ವರ್ಷಗಳಲ್ಲಿ ಒಟ್ಟು 1 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
31ರಿಂದ 40ನೇ ಶ್ರೇಯಾಂಕದವರಿಗೆ ಶೇ.25 ರಷ್ಟು ಅಂದರೆ 50 ಸಾವಿರ ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಂ.ಎಂ. ಪಾಟೀಲ್, ಪ್ರಾಂಶುಪಾಲ ದೀಪಕ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

error: Content is protected !!