ಬೆಳಗಾವಿಯ ಶಹಾಪೂರ-ವಡಗಾವಿ ಮುಖ್ಯ ರಸ್ತೆಗೆ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಹೆಸರಿಡಬೇಕೆಂದು ನೇಕಾರ ಸಮುದಾಯ ಪಟ್ಟು ಹಿಡಿದಿದೆ. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಇದೀಗ ವೇಗ ದೊರೆತಿದ್ದು, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.
ಬೆಳಗಾವಿ ಜಿಲ್ಲಾ ನೇಕಾರರ ಬಳಗದ ವತಿಯಿಂದ ಇಂದು ಮಹಾನಗರದ ಪ್ರಮುಖ ರಸ್ತೆಯ ನಾಮಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.


ವಡಗಾವಿ, ಭಾರತ ನಗರ, ಖಾಸಭಾಗ ಮತ್ತು ಹಳೇಬೆಳಗಾವಿ ಭಾಗದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ನೇಕಾರರು ವಾಸವಿದ್ದು, ತಮ್ಮ ಸಮುದಾಯದ ಆರಾಧ್ಯ ದೈವ ಶ್ರೀ ದೇವರ ದಾಸಿಮಯ್ಯನವರಿಗೆ ಸೂಕ್ತ ಗೌರವ ಸಲ್ಲಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಹಾಗೂ ನೇಕಾರ ಸಮುದಾಯದ ಮುಖಂಡ ವಿನಾಯಕ ತಾಳೂಕರ್, “ಕಳೆದ ಆರು ವರ್ಷಗಳಿಂದ ನಾವು ಈ ರಸ್ತೆಗೆ ನಾಮಕರಣ ಮಾಡುವಂತೆ ಹೋರಾಟ ಮಾಡುತ್ತಿದ್ದೇವೆ. ಶಹಾಪೂರದಿಂದ ವಡಗಾವಿವರೆಗಿನ ಈ ಮುಖ್ಯ ರಸ್ತೆಗೆ ಯಾವುದೇ ನಿರ್ದಿಷ್ಟ ಹೆಸರಿಲ್ಲ. ಕೂಡಲೇ ದಕ್ಷಿಣ ಕ್ಷೇತ್ರದ ಶಾಸಕರು, ಮಹಾಪೌರರು ಹಾಗೂ ಪಾಲಿಕೆ ಸದಸ್ಯರು ಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿ ರಸ್ತೆಗೆ ಆದ್ಯ ವಚನಕಾರರ ಹೆಸರಿಡಬೇಕು” ಎಂದು ಆಗ್ರಹಿಸಿದರು. ನೇಕಾರ ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಾದ ಗೌರವ ದೊರಕಿಸಿಕೊಡಬೇಕೆಂದರು.
ಈ ಸಂದರ್ಭದಲ್ಲಿ ಆನಂದ ಲೋಕರಿ, ಸಿದ್ದಪ್ಪ ಸುಗಂಧಿ, ಮಲ್ಲಪ್ಪ ಸೊಂಟಕ್ಕಿ, ಹನಮಂತ ಬುಚಡಿ, ಉದಯ ವಾಕರ, ಗುರುರಾಜ ಕಳ್ಳಿಮನಿ ಇನ್ನುಳಿದವರು ಭಾಗಿಯಾಗಿದ್ಧರು.
