Bagalkot

ಜಮಖಂಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಭಾರಿ ಅನಾಹುತ…

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕಟ್ಟೆ ಕರೆ ಬಳಿಯಿದ್ದ ಫರ್ನಿಚರ್ ಅಂಗಡಿಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಅಂಗಡಿ ಸುಟ್ಟು ಭಸ್ಮವಾಗಿದೆ.


ಜಮಖಂಡಿ ನಗರದ ಕಟ್ಟೆ ಕರೆ ಬಳಿ ಇರುವ ‘ಆಲಗೂರ ಎಂಟರ್ಪ್ರೈಸಸ್’ ಫರ್ನಿಚರ್ ಅಂಗಡಿಯಲ್ಲಿಂದು ಬೆಳಗಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸಾಧಿಕ್ ಆಲಗೂರು ಅವರಿಗೆ ಸೇರಿದ ಈ ಅಂಗಡಿಯಲ್ಲಿನ ಸೋಫಾ ಸೆಟ್‌ಗಳು, ದುಬಾರಿ ಫರ್ನಿಚರ್ ಮತ್ತು ಅಲಂಕಾರಿಕ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಆಹುತಿಯಾಗಿವೆ. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ, ಪಕ್ಕದಲ್ಲಿದ್ದ ಮೆಟ್ರೋ ಫರ್ನಿಚರ್ ಅಂಗಡಿಗೂ ವ್ಯಾಪಿಸಿತ್ತು.

ಸ್ಥಳೀಯರು ಕೂಡಲೇ ಎಚ್ಚೆತ್ತುಕೊಂಡು, ತೀವ್ರ ಬೆಂಕಿಯ ನಡುವೆಯೂ ಅಂಗಡಿಯಲ್ಲಿದ್ದ ಕೆಲವೊಂದು ವಸ್ತುಗಳನ್ನು ಹೊರತೆಗೆಯಲು ಸಾಹಸ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸಮಯಪ್ರಜ್ಞೆ ಮೆರೆದು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಇಲ್ಲದಿದ್ದರೆ ಪಕ್ಕದ ಅಂಗಡಿಗಳಿಗೂ ಬೆಂಕಿ ಹಬ್ಬಿ ಮತ್ತಷ್ಟು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಸದ್ಯ ಬೆಂಕಿ ನಂದಿಸಲಾಗಿದ್ದು, ಈ ಘಟನೆಯಿಂದ ಅಂಗಡಿ ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದೆ.

Tags:

error: Content is protected !!