Vijaypura

ವಿಜಯಪುರ ಜಿಲ್ಲೆಯಲ್ಲಿ ಗ್ಯಾಸ್ ಟ್ರಬಲ್; ಗ್ಯಾಸ್ ಏಜೆನ್ಸಿಗಳ ಮುಂದೆ ಪೊಲೀಸ್ ಬಂದೋಬಸ್ತ್; ಸುಳ್ಳು ವದಂತಿಗಳದ್ದೇ ಕಾರುಬಾರು

Share

ಮಧ್ಯಪ್ರಾಚ್ಯ ದೇಶಗಳ ನಡುವಿನ ಸಂಘರ್ಷದ ಪರಿಣಾಮ ದೇಶವ್ಯಾಪಿ ಉದ್ಭವಿಸಿರುವ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿನ ವ್ಯತ್ಯಯ ಗುರುವಾರ ಮತ್ತಷ್ಟು ತೀವ್ರಗೊಂಡಿದೆ. ಸಿಲಿಂಡರ್‌ ಪೂರೈಕೆ ಕೊರತೆ ಪರಿಣಾಮ ದೇಶಾದ್ಯಂತ ಹೋಟೆಲ್‌, ಕ್ಯಾಂಟೀನ್‌, ಮದುವೆ ಕಲ್ಯಾಣ ಮಂಟಪಗಳಿಗೆ, ಹಾಸ್ಟೆಲ್ ಗಳಿಗೆ ಭಾರೀ ಹೊಡೆತ ಬಿದ್ದಿದೆ. ಇನ್ನೂ ವಿಜಯಪುರ ಜಿಲ್ಲೆಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲಾ. ಸರತಿ ಸಾಲಿನಲ್ಲಿ ಆಟೋ ಚಾಲಕರು ಗ್ಯಾಸ್ ಗಾಗಿ ನಿಂತು ಕಾಯುವಂತೆ ಆಗಿದೆ. ಅಲ್ಲದೇ ಗ್ಯಾಸ್ ಗೋಡಾವನ್ ಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಗೃಹಬಳಕೆ ಸಿಲಿಂಡ‌ರ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಗೃಹಬಳಕೆ ಸಿಲಿಂಡ‌ರ್ ಗ್ರಾಹಕರು ಭಾರತ ಗ್ಯಾಸ್ ವಿತರಕರ ಅಂಗಡಿಯ ಮುಂದೆ ಮಂಗಳವಾರ ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್‌ ಪಡೆಯಲು ಪರದಾಡುತ್ತಿದ್ದಾರೆ. ಯುದ್ಧದ ಭೀತಿಯಿಂದಾಗಿ ಸಿಲಿಂಡ‌ರ್ ಪೂರೈಕೆ ವಿಳಂಬವಾಗಬಹುದು ಎಂಬ ಭಯ ಗ್ರಾಹಕರನ್ನು ಕಾಡಿದೆ. ಸಿಲಿಂಡ‌ರ್ ಕೊರತೆಯಿಂದಾಗಿ ನೂರಾರು ಗ್ರಾಹಕರು ಸಿಲಿಂಡ‌ರ್ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಯಾವುದೇ ಗೊಂದಲ ಮತ್ತು ಗಲಾಟೆ ನಡೆಯಬಾರದು ಎಂಬ ಉದ್ದೇಶದಿಂದ ಪ್ರತಿದಿನ ಪೊಲೀಸ್ ಅಧಿಕಾರಿಗಳು ಸಿಲಿಂಡ‌ರ್ ಅಂಗಡಿಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗ್ರಾಹಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಸಿಲಿಂಡ‌ರ್ ಪಡೆದರು. ಇನ್ನೂ ವಾಣಿಜ್ಯ ಸಿಲಿಂಡರ್‌ ಸಮಸ್ಯೆ ವ್ಯಾಪಕವಾಗಿದ್ದು, ಪೂರೈಕೆಯಲ್ಲಿ ಶೇ.50ರಷ್ಟು ಕಡಿತವಾಗಿದೆ. ಸಿಲಿಂಡರ್‌ ಕೊರತೆಯ ಬಿಸಿ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳ ಮೇಲೂ ಬಿದ್ದಿದ್ದು, ರೋಗಿಗಳಿಗೆ ಪೂರೈಕೆಯಾಗುವ ಊಟದ ಮೆನುವಿಗೂ ಕತ್ತರಿ ಬಿದ್ದಿದೆ. ಇನ್ನು ಸಾಮೂಹಿಕ ಭೋಜನ ಸಿದ್ಧತೆಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ವಿವಾಹಗಳನ್ನು ಕೂಡಾ ನಡೆಸುವದು ಹೇಗೆ ಎಂಬ ಚಿಂತೆ ಕಾಡತೊಡಗಿದೆ, ಇನ್ನೂ ಗೃಹ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಕಮರ್ಷಿಯಲ್ ಸಿಲಿಂಡರ್ ಗಳಿಗೆ ಮಾತ್ರ ತೊಂದರೆಯಾಗಲಿದೆ. ಗ್ರಾಹಕರು ವಿನಾಕಾರಣ ಗೊಂದಲಗಳಿಗೆ ಕಿವಿಗೊಡದೆ, ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಬಾರದು ಎಂದು ಮನವಿ ಮಾಡುತ್ತಿರುವದು ಕಂಡು ಬರುತ್ತಿದೆ. ಇನ್ನೂ ಸುಳ್ಳು ವದಂತಿಗಳು ಹೆಚ್ಚಾಗಿ ಹರಡತೊಡಗಿವೆ.

ಅಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್‌ ಜತೆಗೆ ಆಟೋ ಗ್ಯಾಸ್‌ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರ ಜೇಬಿಗೆ ಹೊರೆಯಾಗುತ್ತಿದೆ. ಅನಿಲ ಸಿಲಿಂಡರ್‌ ಅಭಾವ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದು ಯಾವ ಹಂತ ತಲುಪುತ್ತದೆಯೋ ಎಂಬ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿದೆ. ಆಟೋ ಚಾಲಕರು ಬಾಡಿಗೆ ಹಣವನ್ನು ಜಾಸ್ತಿ ಮಾಡಿದ್ದಾರೆ. ಆಟೋ ಚಾಲಕರು ಗ್ಯಾಸ್ ಬಂಕ್‌ಗಳ ಬಳಿ ಕಿಲೋಮೀಟರ್‌ಗಟ್ಟಲೆ ಸರತಿ ನಿಲ್ಲುವಂತಾಗಿದೆ. 90 ರೂ.ಗೆ ಮಾರಾಟವಾಗುತ್ತಿರುವ ಗ್ಯಾಸ್‌ನಿಂದಾಗಿ ಆಟೋ ಚಾಲಕರ ದಿನನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ ಹೊಟೆಲ್ ಗಳಿಗೆ ದಿನನಿತ್ಯ ಮೂರು ಸಿಲಿಂಡರ್ಗಳ ಅಗತ್ಯವಿದ್ದರೂ ಕೇವಲ ಒಂದನ್ನು ಮಾತ್ರ ನೀಡಲಾಗುತ್ತಿದ್ದು, ಇದರಿಂದಾಗಿ ಹೋಟೆಲ್ಗಳ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಹೋಟೆಲ್ ಮಾಲೀಕರು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆದಿರುವ ಯುದ್ಧದ ಪರಿಣಾಮ ವಿಜಯಪುರ ಜಿಲ್ಲೆಗೆ ತಟ್ಟಿದಂತಾಗಿದೆ. ಯುದ್ದ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲಾ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಮತ್ತಷ್ಟು ಹೆಚ್ಚಾದರೆ ಆಶ್ಚರ್ಯ ಪಡಬೇಕಿಲ್ಲ,

Tags:

error: Content is protected !!