ಬೆಳಗಾವಿ ಸ್ಮಾರ್ಟ್ ಸಿಟಿಯೆಂದು ಕರೆಸಿಕೊಂಡರೂ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸ್ಥಿತಿ ಮಾತ್ರ ಹೇಳತೀರದಾಗಿದೆ. ಪ್ರಯಾಣಿಕರ ಹಿತಕ್ಕಾಗಿ ನಿರ್ಮಿಸಲಾದ ನೂತನ ನಿಲ್ದಾಣವು ಇಂದು ತ್ಯಾಜ್ಯದ ಆಗರವಾಗಿದ್ದು, ಅಧಿಕಾರಿಗಳ ಮೌನ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.


ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಇಂದು ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ನಿಲ್ದಾಣದ ಆವರಣದ ತುಂಬೆಲ್ಲಾ ಪ್ಲಾಸ್ಟಿಕ್ ಬಾಟಲಿಗಳು, ಕಾಗದದ ಚೂರುಗಳು ಹಾಗೂ ಇತರ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸುಸಜ್ಜಿತ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ದೂರದ ಊರುಗಳಿಂದ ಬರುವ ಪ್ರಯಾಣಿಕರು ಈ ಗಲೀಜು ವಾತಾವರಣವನ್ನು ಕಂಡು ಅಸಹ್ಯ ಪಟ್ಟುಕೊಳ್ಳುವಂತಾಗಿದ್ದು, ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಾತ್ರಿಯಾಗುತ್ತಿದ್ದಂತೆಯೇ ಈ ನಿಲ್ದಾಣದ ಆವರಣವು ಅಕ್ಕಪಕ್ಕದ ವಸತಿ ಸಂಕೀರ್ಣಗಳ ಮತ್ತು ಅಂಗಡಿಕಾರರ ‘ತ್ಯಾಜ್ಯ ವಿಲೇವಾರಿ ಕೇಂದ್ರ’ವಾಗಿ ಬದಲಾಗುತ್ತಿದೆ. ಕತ್ತಲಲ್ಲಿ ಕಸವನ್ನು ತಂದು ಇಲ್ಲಿಯೇ ಸುರಿಯಲಾಗುತ್ತಿದ್ದರೂ, ಇದನ್ನು ತಡೆಗಟ್ಟಬೇಕಾದ ಸಾರಿಗೆ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಶೌಚಾಲಯಗಳ ಶುಚಿತ್ವ ಕಾಪಾಡಬೇಕಾದ ಇಲಾಖೆಯ ಸಿಬ್ಬಂದಿಗಳು ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾರಿಗೆ ಸಂಸ್ಥೆಯ ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ನಿಲ್ದಾಣದ ಶುಚಿತ್ವಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಸ್ಮಾರ್ಟ್ ಸಿಟಿಯ ಗೌರವ ಉಳಿಸಲು ಇನ್ನಾದರೂ ಈ ನೂತನ ನಿಲ್ದಾಣಕ್ಕೆ ಕಾಯಕಲ್ಪ ನೀಡಬೇಕೆಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
