ನಾವು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಒಬ್ಬ ಯುವ ಸಾಧಕನ ಕಥೆಯನ್ನು ಹೇಳ ಹೊರಟಿದ್ದೇವೆ. ಹುಟ್ಟು ಅಂಧತ್ವವಿದ್ದರೂ, ಅಚಲ ವಿಶ್ವಾಸ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಬೆಳಗಾವಿ ಪಾಲಿಕೆಯ ಎಸ್.ಡಿ.ಎ. ಸುಮೀತ್ ಮನೋಹರ್ ಮೋಟೆಕರ ಅವರು ಕೆ.ಎ.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಇಡೀ ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

ಗೋಕಾಕ್ ಮೂಲದ ನಿವಾಸಿ ಸದ್ಯ ಬೆಳಗಾವಿ ಮಹಾನಗರ ಪಾಲಿಕೆಯ ಎಸ್.ಡಿ.ಎ. ಸುಮೀತ್ ಮನೋಹರ್ ಮೋಟೆಕರ ಹುಟ್ಟು ಅಂಧತ್ವವನ್ನು ಹೊಂದಿದ್ದು, ಅವರು 2021 ರಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಎ.ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ರಾಜ್ಯಕ್ಕೆ 8ನೇ ಸ್ಥಾನವನ್ನು ಪಡೆದಿದ್ದಾರೆ. ಈ ಕುರಿತು ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಸುಮಿತ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಗೋಕಾಕ್‌ನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸುಮೀತ್‌ಗೆ ಜಗತ್ತು ಕಾಣುತ್ತಿರಲಿಲ್ಲ, ಆದರೆ ಭವಿಷ್ಯದ ಕನಸುಗಳು ಮಾತ್ರ ಅತ್ಯಂತ ಸ್ಪಷ್ಟವಾಗಿದ್ದವು. ಹುಟ್ಟು ಅಂಧತ್ವವಿದ್ದರೂ, ಮರೆಯಲಾಗದ ಛಲ ಅವರಲ್ಲಿತ್ತು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಸ್.ಡಿ.ಎ. ಆಗಿ ಕೆಲಸ ಮಾಡುತ್ತಿದ್ದಾಗ, ಅವರ ಮನದಲ್ಲಿ ಮತ್ತೊಂದು ದೊಡ್ಡ ಕನಸು ಚಿಗುರಿತ್ತು – ಅದು ಕೆ.ಎ.ಎಸ್ (KAS) ಅಧಿಕಾರಿಯಾಗುವುದು. ಹಗಲಿನಲ್ಲಿ ಪಾಲಿಕೆಯ ಕೆಲಸ, ರಾತ್ರಿಯಲ್ಲಿ ಅಭ್ಯಾಸ – ಇದು ಸುಮೀತ್ ಅವರ ದಿನಚರಿಯಾಗಿತ್ತು. ಓದಲು ಕಣ್ಣುಗಳಿಲ್ಲದಿದ್ದರೂ, ಸುಮೀತ್ ಸೋಲಲಿಲ್ಲ. ಆಧುನಿಕ ತಂತ್ರಜ್ಞಾನದ ಟಾಕಿಂಗ್ ಲ್ಯಾಪ್ಟಾಪ್ ಅವರ ಪಾಲಿಗೆ ಕಣ್ಣುಗಳಾದವು. ಪುಸ್ತಕಗಳನ್ನು ಓದುತ್ತಾ, ಕೇಳುತ್ತಾ ಅವರು ಜ್ಞಾನದ ಭಂಡಾರವನ್ನೇ ಸೃಷ್ಟಿಸಿಕೊಂಡರು. ದೈಹಿಕ ದೌರ್ಬಲ್ಯಗಳು ಸೋಮಾರಿತನಕ್ಕೆ ನೆಪವಾಗಬಾರದು ಎಂಬುದನ್ನು ಅವರು ಸಾಬೀತುಪಡಿಸಿದರು.
ತಮ್ಮ ಸಾಧನೆಯ ಕುರಿತು ಮಾತನಾಡಿದ ಎಸ್.ಡಿ.ಎ. ಸುಮೀತ್ ಮನೋಹರ್ ಮೋಟೆಕರ ತಂತ್ರಜ್ಞಾನ ಅತ್ಯಂತ ಮುಂದುವರೆದಿದ್ದು, ಯಾವುದು ಅಸಾಧ್ಯವಲ್ಲ ಎಂಬ ಕಾಲ ನಿರ್ಮಾಣಗೊಂಡಿದೆ. ತಾವು ದೃಷ್ಠಿಹೀನರಾಗಿದ್ದರೂ ಟಾಕಿಂಗ್ ಲ್ಯಾಪಟಾಪ್ ಮೂಲಕ ಈ ಸಾಧನೆಯನ್ನು ಮಾಡಲೂ ನೆರವಾಯಿತು. ಕೆ.ಎ.ಎಸ್ ಮತ್ತ ಐ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಂಧತ್ವ ಅಥವಾ ಶರೀರ ವ್ಯಾಧಿಗಳು ಅಡ್ಡವಾಗುವುದಿಲ್ಲ. ಕಷ್ಟಪಟ್ಟರೇ ಯಾವುದು ಅಸಾಧ್ಯವಲ್ಲ ಎಂದಿದ್ದಾರೆ.
ಎಇಇ ಹಣುಮಂತ ಕಲಾದಗಿ ಅವರು ಸುಮಿತ್ ಅವರ ಈ ಸಾಧನೆಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ಓದಿ ಬರೆದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಸ್.ಡಿ.ಎ. ಹುದ್ಧೆಯನ್ನು ಅಲಂಕರಿಸಿದ್ದರು. ಈಗ ತಮ್ಮ ಛಲವನ್ನು ಬಿಡದೇ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅದರಲ್ಲಿಯೂ ಯಶಸ್ವಿಯಾಗಿದ್ದಾರೆ. ದೃಷ್ಠಿಹೀನರಾದರೂ ಅವರು ಗೈದ ಸಾಧನೆ ಅಪ್ರತಿಮವಾಗಿದ್ದು, 5 ವರ್ಷದ ನಂತರ ಬೆಳಗಾವಿ ಮಹಾಪಾಲಿಕೆಗೆ ಆಯುಕ್ತರಾಗಿ ಬರಲಿ ಎಂದು ಆಶಿಸಿದರು.
ಅಂತಿಮವಾಗಿ, ಕೆ.ಎ.ಎಸ್ ಪರೀಕ್ಷೆಯ ಫಲಿತಾಂಶ ಬಂದಾಗ ಇಡೀ ರಾಜ್ಯವೇ ಬೆರಗಾಗಿದೆ. ಸುಮೀತ್ ಅವರು ರಾಜ್ಯಕ್ಕೆ 8ನೇ ಸ್ಥಾನ ಗಳಿಸಿ, ತಮ್ಮ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲವನ್ನು ಪಡೆದಿದ್ದರು. “ತಂತ್ರಜ್ಞಾನದ ಸಹಾಯದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು,” ಎಂದು ನಗುನಗುತ್ತ ಹೇಳುವ ಸುಮೀತ್, ಇಂದು ಕೇವಲ ಬೆಳಗಾವಿ ಪಾಲಿಕೆಯ ಸಿಬ್ಬಂದಿಗೆ ಮಾತ್ರವಲ್ಲ, ಇಡೀ ನಾಡಿನ ಸಾವಿರಾರು ಯುವಕರಿಗೆ ಬದುಕಿನ ಪಾಠವಾಗಿದ್ದಾರೆ. ಅಂಧತ್ವ ಸುಮೀತ್ ಅವರ ದೃಷ್ಟಿಯನ್ನು ಕಿತ್ತುಕೊಂಡಿರಬಹುದು, ಆದರೆ ಅವರ ಗುರಿಯನ್ನು ತಲುಪುವ ದೃಢಸಂಕಲ್ಪವನ್ನು ಎಂದಿಗೂ ಅಲ್ಲ.
