ಬೆಳಗಾವಿಯ ಶ್ರೀನಗರದಲ್ಲಿ ಶ್ರೀ ಚಾಂಗದೇವ ಉರ್ಫ ರಾಜಾಬಾಗಸವಾರ (ಯಮನೂರ ಅಜ್ಜ) ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.

ಪ್ರತಿ ವರ್ಷದಂತೆ ಹೋಳಿ ಹಬ್ಬದ ಐದನೇ ದಿನದಿಂದ ಪ್ರಾರಂಭವಾದ ಶ್ರೀ ಚಾಂಗದೇವ ಉರ್ಫ ರಾಜಾಬಾಗಸವಾರ ಜಾತ್ರಾ ಮಹೋತ್ಸವವು ಈ ಬಾರಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ರವಿವಾರ ಮುಂಜಾನೆ 11.15ಕ್ಕೆ ಶ್ರೀಗಳ ಪಲ್ಲಕ್ಕಿ ರಥವು ಕಣಬರ್ಗಿಯ ಶ್ರೀ ಸಿದ್ದೇಶ್ವರ ಮಂದಿರಕ್ಕೆ ಭೇಟಿ ನೀಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಂದು ಸಾಯಂಕಾಲ ಶ್ರೀ ಯಮನೂರ ಅಜ್ಜನವರಿಗೆ ಭಕ್ತಿಯಿಂದ ಗಂಧಾಭಿಷೇಕ ನೆರವೇರಿಸಲಾಯಿತು.
ಸೋಮವಾರಮಧ್ಯಾಹ್ನ 12.20ಕ್ಕೆ ಮಹಾಪೂಜೆ ಹಾಗೂ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಶ್ರೀನಗರದ ಶ್ರೀ ಯಲ್ಲಾರಲಿಂಗೇಶ್ವರ ಭಜನ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ಮಂಗಳವಾರ ಸಾಯಂಕಾಲ 6.00 ಗಂಟೆಗೆ ನಡೆದ ವಿಶೇಷ ಅಶ್ವಪೂಜೆ ಹಾಗೂ ಪಲ್ಲಕ್ಕಿಯ ದೇವಸ್ಥಾನ ಪ್ರದಕ್ಷಿಣೆ ಕಾರ್ಯಕ್ರಮಗಳು ಭಕ್ತರ ಕಣ್ಮನ ಸೆಳೆದವು. ಮೂರೂ ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆದ ಈ ಜಾತ್ರೆಯು ಶ್ರದ್ಧಾ ಭಕ್ತಿಯಿಂದ ಸುಸಂಪನ್ನಗೊಂಡಿತು. ಶ್ರೀ ಚಾಂಗದೇವ ಉರ್ಫ ರಾಜಾಬಾಗಸವಾರ ಸೇವಾ ಕಮಿಟಿ ವತಿಯಿಂದ ಆಯೋಜಿಸಲಾಗಿರುವ ಈ ಜಾತ್ರಾ ಮಹೋತ್ಸವದಲ್ಲಿ ಗುರುವಾರ (ಮಾರ್ಚ್ 12) ಸಾಯಂಕಾಲ 5.00 ಗಂಟೆಗೆ ಗುರು ಪೂಜೆ ಹಾಗೂ ದೇವಸ್ಥಾನದ ಸುತ್ತ ಪಲ್ಲಕ್ಕಿ ಪ್ರದಕ್ಷಿಣೆ ಜರುಗಲಿದೆ. ಇದೇ ಸಂದರ್ಭದಲ್ಲಿ ನಿಪ್ಪಾಣಿಯ ಶ್ರೀ ಶ್ಯಾಮ ದತ್ತ ಭಜನಾ ಮಂಡಳಿಯವರಿಂದ ಭಜನೆ ಮತ್ತು ಕೀರ್ತನೆ ಕಾರ್ಯಕ್ರಮಗಳು ನಡೆಯಲಿದ್ದು, ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗವಿರಲಿದೆ. ಇನ್ನುಳಿದಂತೆ ಶುಕ್ರವಾರ (ಮಾರ್ಚ್ 13) ಮಧ್ಯಾಹ್ನ 1.00 ಗಂಟೆಗೆ ಸಾಂಪ್ರದಾಯಿಕ ‘ಗಾರಾಣಿ’ ಹಾಕುವ ಕಾರ್ಯಕ್ರಮವಿದ್ದು, ಪಾಲ್ಗೊಳ್ಳುವ ಭಕ್ತರು ಎಲೆ-ಅಡಿಕೆ ತರುವಂತೆ ಸಮಿತಿ ಕೋರಿದೆ. ಅಂದು ಸಾಯಂಕಾಲ ಭಂಡಾರ ಹಾಗೂ ಹಬೀರ ಉತ್ಸವದೊಂದಿಗೆ ವಿಜೃಂಭಣೆಯ ಮೆರವಣಿಗೆ ನಡೆಯಲಿದ್ದು, ರಾತ್ರಿ ಭಕ್ತರಿಗೆ ವಿಶೇಷ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
