ಅಪ್ರಾಪ್ತ ಬಾಲಕಿಯ ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಬೆಳಗಾವಿಯ ನ್ಯಾಯಾಲಯವು 3 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಕಾಕತಿ ಪೊಲೀಸರು ನಡೆಸಿದ ಚುರುಕಿನ ತನಿಖೆಯಿಂದಾಗಿ ಆರೋಪಿಗೆ ದಂಡದ ಜೊತೆಗೆ ಜೈಲು ಶಿಕ್ಷೆಯಾಗಿದ್ದು, ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

ಬೆಳಗಾವಿ ತಾಲೂಕಿನ ಪರಶ್ಯಾನಟ್ಟಿ ನಿವಾಸಿ ಸಚಿನ್ ಅಪ್ಪಯ್ಯಾ ನಾಯಕ (24) ಎಂಬಾತನಿಗೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಲಾಗಿದೆ. 2024ರ ಜನವರಿಯಲ್ಲಿ ಬಾಲಕಿಯು ಮೇವು ತರಲು ಹೋಗುತ್ತಿದ್ದಾಗ, ಆರೋಪಿಯು ಆಕೆಯನ್ನು ಹಿಂಬಾಲಿಸಿ ಕಣ್ಣು ಹೊಡೆದು ಸನ್ನೆಯ ಮೂಲಕ ಲೈಂಗಿಕವಾಗಿ ಪೀಡಿಸಿದ್ದನು. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಅಂದಿನ ಪಿಎಸ್‌ಐಗಳಾದ ಮಂಜುನಾಥ ಹುಲಕುಂದ ಮತ್ತು ರವಿ ವಡ್ಡರ ನೇತೃತ್ವದ ತಂಡವು ನಡೆಸಿ, ನ್ಯಾಯಾಲಯಕ್ಕೆ ಬಲಿಷ್ಠ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿತ್ತು. ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು ಪ್ರಕರಣದ ವಿಚಾರಣೆ ನಡೆಸಿ, ಮಾರ್ಚ್ 10, 2026 ರಂದು ಅಂತಿಮ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ವಿ. ಪಾಟೀಲ್ ಅವರು ಪರಿಣಾಮಕಾರಿ ವಾದ ಮಂಡಿಸಿದ್ದರು. ತನಿಖೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.
