Belagavi

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕಾಕತಿ ಪೊಲೀಸರ ಭರ್ಜರಿ ತನಿಖೆ, ಆರೋಪಿಗೆ 27 ವರ್ಷ ಕಠಿಣ ಜೈಲು ಶಿಕ್ಷೆ!

Share

ಬೆಳಗಾವಿಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣದ ತೀರ್ಪು ಹೊರಬಿದ್ದಿದೆ. ತನಿಖಾಧಿಕಾರಿಗಳ ಬಲಿಷ್ಠ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ಆರೋಪಿಗೆ ದೀರ್ಘಾವಧಿಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಐತಿಹಾಸಿಕ ಆದೇಶ ನೀಡಿದೆ.

ಬೆಳಗಾವಿ ತಾಲೂಕಿನ ಬೆನಕೊಳ್ಳಿ ಗ್ರಾಮದ ನಿವಾಸಿ ಈರಪ್ಪ ದನಾಕಾರ ಎಂಬಾತನಿಗೆ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕಾಗಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 27 ವರ್ಷಗಳ ಜೈಲು ಶಿಕ್ಷೆ ಹಾಗೂ 1,25,000 ರೂಪಾಯಿ ದಂಡ ವಿಧಿಸಿದೆ. 2025ರ ಮಾರ್ಚ್ ತಿಂಗಳಲ್ಲಿ ಆರೋಪಿಯು ಬಾಲಕಿಯನ್ನು ಪುಣಗುತ್ತಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಎಸಗಿದ್ದನು. ಈ ಸಂಬಂಧ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇವಲ ಒಂದು ತಿಂಗಳ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.

ಕಾಕತಿ ಪಿ.ಐ ಸುರೇಶ್ ಪಿ. ಶಿಂಗಿ ನೇತೃತ್ವದ ತಂಡವು ವೈಜ್ಞಾನಿಕವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ವಿ. ಪಾಟೀಲ್ ಅವರು ಪ್ರಬಲ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆ ಪ್ರಕಟಿಸಿದ್ದಾರೆ. ಪೊಲೀಸರ ಈ ದಕ್ಷ ಕಾರ್ಯವೈಖರಿಯನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!