BELAGAVI

ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ; ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ ವಡಗಾಂವ ವಾಸಿಗಳು!!!

Share

ಬೇಸಿಗೆ ಆರಂಭಕ್ಕೂ ಮುನ್ನವೇ ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರಿಗೆ ಚರಂಡಿ ನೀರು ಬೆರೆಯುತ್ತಿರುವುದನ್ನು ವಿರೋಧಿಸಿ ವಡಗಾಂವಯ ರೈತ ಗಲ್ಲಿಯ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.
ಬೆಳಗಾವಿ ನಗರದ ವಡಗಾಂವಿಯ ರೈತ ಗಲ್ಲಿಯ ನಿವಾಸಿಗಳು ಕಳೆದ 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ಚರಂಡಿ ನೀರು ಪೈಪ್‌ಲೈನ್‌ಗೆ ಸೇರುತ್ತಿರುವ ಕುರಿತು ಪಾಲಿಕೆಗೆ ಪದೇ ಪದೆ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ತಾಳ್ಮೆ ಕಳೆದುಕೊಂಡ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು ಪಾಲಿಕೆ ಕಚೇರಿಯ ಆವರಣಕ್ಕೆ ಆಗಮಿಸಿ, ಅಧಿಕಾರಿಗಳ ಬೇಜವಾಬ್ದಾರಿಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು. ಮಹಾಪಾಲಿಕೆ ಕಚೇರಿಗೆ ನುಗ್ಗಲು ಮುಂದಾದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರಿಗೆ ಹರಸಾಸಹ ಪಡಬೇಕಾಯಿತು.

ಒಳಗೆ ಪ್ರವೇಶ ನೀಡದ ಹಿನ್ನೆಲೆ ಪ್ರತಿಭಟನಾಕಾರರು ಪಾಲಿಕೆಯ ಮುಂದೆ ಖಾಲಿ ಕೊಡಗಳನ್ನು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಪೂರೈಕೆಯಾಗುತ್ತಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ದೂರಿದರು.
ಕಳೆದ 15 ದಿನಗಳಿಂದ ಕೊಳಚೆ ನೀರು ಬೆರಕೆಯಾದ ನೀರು ಪೂರೈಕೆಯಾಗುತ್ತಿದೆ. ಜನಜಾನುವಾರುಗಳಿಗೆ ಕುಡಿಯಲು ತೊಂದರೆಯಾಗುತ್ತಿದೆ. ಹಲವಾರು ಮನವಿಯನ್ನು ನೀಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ನಾವು ನೀರು ಕುಡಿಯಬೇಕೋ ವಿಷ ಕುಡಿಯಬೇಕೋ? ಇವತ್ತು ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದು, ನಾಳೆಯ ವರೆಗೂ ಸಮಸ್ಯೆ ಪರಿಹರಿಸದಿದ್ದರೇ, ವಡಗಾಂವನ ಜನರು ಮುತ್ತಿಗೆ ಹಾಕುತ್ತೇವೆ ಎಂದು ರಾಜು ಮರವೆ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನಾನಿರತ ಮಹಿಳೆಯರು ಕುಡಿಯುವ ನೀರಿನ ಪೂರೈಕೆಯಿಲ್ಲದೇ ಜನರು ತೊಂದರೆಗಿಡಾಗುತ್ತಿದ್ದಾರೆ. ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗೇ ಕಾಯುವ ಪರಿಸ್ಥಿತಿ ಎದುರಾಗಿದೆ. ಟ್ಯಾಂಕರ್ ನವರು 800 ರೂಪಾಯಿ ಬೇಡಿಕೆಯಿಡುತ್ತಿದ್ದಾರೆ. ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ದೂರಿದರು.

ಘಟನಾ ಸ್ಥಳಕ್ಕೆ ಮಾರ್ಕೆಟ್ ಸಿಪಿಐ ಜೆ.ಎಂ. ಕಾಲಿಮಿರ್ಚಿ ಹಾಗೂ ಪಿಎಸ್ಐ ವಿಠ್ಠಲ ಹಾವನ್ನವರ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ನಂತರ ಆಯುಕ್ತರಾದ ಕಾರ್ತೀಕ್ ಎಂ ಮತ್ತು ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ ಅವರು, ಮನವಿಯನ್ನು ಸ್ವೀಕರಿಸಿಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

Tags:

error: Content is protected !!