ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಪೊಲೀಸರು ಮತ್ತು ಸ್ಥಳೀಯ ಯುವಕರು ಮಾದರಿಯಾಗಿದ್ದಾರೆ. ಬೆಳಗಾವಿಯ ಹಳೆ ಭಾಜೀ ಮಾರ್ಕೆಟ್ ಬಳಿ ರಸ್ತೆಯಲ್ಲಿದ್ದ ತಗ್ಗುಗುಂಡಿಗಳಿಂದ ವಾಹನ ಸವಾರರು ಪರದಾಡುತ್ತಿದ್ದುದನ್ನು ಕಂಡು, ಪಿಎಸ್ಐ ಮಹಾಂತೇಶ್ ಮಠಪತಿ ಮತ್ತು ಯುವಕರ ತಂಡ ಸ್ವತಃ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಬೆಳಗಾವಿಯ ಹಳೆ ಭಾಜೀ ಮಾರ್ಕೆಟ್ ಹಾಗೂ ಕೇಂದ್ರ ಬಸ್ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಬಿದ್ದಿದ್ದ ತಗ್ಗುಗುಂಡಿಗಳಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳೀಯರು ಸಂಚಾರ ಪಿಎಸ್ಐ ಮಹಾಂತೇಶ್ ಮಠಪತಿ ಅವರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದರು. ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಪಿಎಸ್ಐ ಮಠಪತಿ ಅವರು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಪಿಎಸ್ಐ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಯುವಕರಾದ ಪಂಕಜ್ ಜಾದವ್, ಅಪ್ಪು ಜಾದವ್, ಅಯಾಜ್ ಮತ್ತು ಇತರರು ಒಗ್ಗೂಡಿ, ರಸ್ತೆಯಲ್ಲಿದ್ದ ತಗ್ಗುಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಸುಗಮವಾಗುವಂತೆ ಅಭಿವೃದ್ಧಿಪಡಿಸಿದರು. ಪೊಲೀಸರು ಮತ್ತು ಸಾರ್ವಜನಿಕರ ಈ ಸಹಭಾಗಿತ್ವದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
