ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಕದನದ ಪರಿಣಾಮವಾಗಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಿಜಯಪುರ ನಗರದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.


ಗ್ಯಾಸ್ ಸಿಗದ ಕಾರಣ ಆಟೋ ಚಾಲಕರು ನಗರದಲ್ಲಿರುವ ಗ್ಯಾಸ್ ಬಂಕ್ಗಳ ಬಳಿ ಕಿಲೋಮೀಟರ್ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಇನ್ನೂ 60 ರೂ ಗ್ಯಾಸ್ 90ರೂಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ನಗರದ ಜಮಖಂಡಿ ರಸ್ತೆಯಲ್ಲಿರುವ ಗ್ಯಾಸ್ ಬಂಕ್ಗಳ ಬಳಿ ಮುಂಜಾನೆ ನಸುಕಿನ ಜಾವವೇ ಆಟೋ ಚಾಲಕರು ಸಾಲಿನಲ್ಲಿ ನಿಂತು ಗ್ಯಾಸ್ ತುಂಬಿಸಿಕೊಳ್ಳಲು ಕಾಯುತ್ತಿರುವುದು ಗಮನಸೆಳೆಯಿತು. ಎಲ್ಪಿಜಿ ಸಿಗದಿದ್ದರೆ ದಿನನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕ ಆಟೋ ಚಾಲಕರಲ್ಲಿ ವ್ಯಕ್ತವಾಗಿದೆ.

ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ತಾಪತ್ರಯ ಅನುಭವಿಸುತ್ತಿದ್ದು, ಹಲವು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ಯಾಸ್ ಪೂರೈಕೆ ಸರಾಗವಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
