ಖಾನಾಪೂರ ತಾಲೂಕಿನ: ಸಿಂಗಿನಕೊಪ್ಪ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಭೀಕರ ಬೆಂಕಿ ತಗುಲಿ ಅಂದಾಜು ಹತ್ತು ಲಕ್ಷ ರೂಪಾಯಿ ನಷ್ಟ ಉಂಟಾದ ಘಟನೆ ಸಂಭವಿಸಿದೆ.

ಈ ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ ಎಲ್ಲಾ ಸಾಮಾನುಗಳು ಸುಟ್ಟು ಭಸ್ಮವಾಗಿದ್ದು ಕುಟುಂಬ ಅಕ್ಷರಶಃ ಬೀದಿಗೆ ಬಂದಂತಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ನಿನ್ನೆ ಸಂಜೆ 7.00 ಗಂಟೆಯ ಸುಮಾರಿಗೆ ಗ್ರಾಮದ ನಿವಾಸಿ ಸ್ವಾತಿ ಸಂತೋಷ ಕುಂಬಾರ ಅವರ ಮನೆಗೆ ಏಕಾಏಕಿ ಬೆಂಕಿ ತಗುಲಿತು. ಪ್ರಾಥಮಿಕ ಅಂದಾಜಿನ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದಲೇ ಈ ಬೆಂಕಿ ತಗುಲಿರಬಹುದು ಎಂದು ಹೇಳಲಾಗುತ್ತಿದೆ.
ಬೆಂಕಿ ತಗುಲಿದ ಕೆಲವೇ ಕ್ಷಣಗಳಲ್ಲಿ ಅದು ಭೀಕರ ರೂಪ ಪಡೆದುಕೊಂಡಿತು. ಮನೆಯಲ್ಲಿ ಇಟ್ಟಿದ್ದ ಬಟ್ಟೆಗಳು, ಆಭರಣಗಳು, ನಗದು ಹಣ, ಟಿವಿ, ಫ್ರಿಜ್, ಫರ್ನಿಚರ್ ಹಾಗೂ ಇತರೆ ಗೃಹೋಪಯೋಗಿ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಇದರಿಂದ ಅಂದಾಜು ಹತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಗ್ರಾಮದ ಜನರು ತಕ್ಷಣ ಸ್ಥಳಕ್ಕೆ ಧಾವಿಸಿ ಪಕ್ಕದಲ್ಲಿದ್ದ ಬೋರ್ವೆಲ್ ಮೋಟಾರ್ ಆರಂಭಿಸಿ ನೀರಿನ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನ ಮಾಡಲಾಯಿತು. ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳದ ವಾಹನಗಳು ಕೂಡ ಸ್ಥಳಕ್ಕೆ ಆಗಮಿಸಿವೆ. ಗ್ರಾಮಸ್ಥರ ಸಹಕಾರದಿಂದ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ ಅಷ್ಟರೊಳಗೆ ಮನೆಯಲ್ಲಿದ್ದ ಎಲ್ಲಾ ಸಾಮಾನುಗಳು ಸುಟ್ಟು ಭಸ್ಮವಾಗಿದ್ದವು.
ಈ ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟುಹೋಗಿರುವುದರಿಂದ ಕುಟುಂಬದ ಬಳಿ ದೇಹದ ಮೇಲಿದ್ದ ಬಟ್ಟೆ ಹೊರತುಪಡಿಸಿ ಇನ್ನೇನು ಉಳಿದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಈ ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ.
ಈ ಘಟನೆಯ ಶಾಸಕರು ತಕ್ಷಣ ಗಮನ ಹರಿಸಿ ಪೀಡಿತ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.
