ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ವಿಶೇಷ ಪಾಕ್ಸೋ ನ್ಯಾಯಾಲಯವು 30 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಏನ್ನೆಂದರೆ ಸಂಜಯ ವಿಠ್ಠಲ ಬೈಲೂರ (ವಯಸ್ಸು 36, ಸಾ. ಡೋರಿ, ತಾ. ಅಳ್ನಾವರ, ಜಿ. ಧಾರವಾಡ) ಇವರು ತನ್ನ ದೊಡ್ಡಣ್ಣನ ಮಗಳು ಅಪ್ರಾಪ್ತೆ ಎಂಬುದು ತಿಳಿದಿದ್ದರೂ ಸಹ 2025ರಲ್ಲಿ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪಾಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಯನ್ನು ಪಿಎಸ್ಐ ಎಂ. ಬಿ. ಬಿರಾದಾರ ಹಾಗೂ ಪೋಲಿಸ್ ಇನ್ಸ್ಪೆಕ್ಟರ್ ಎಲ್. ಎಚ್. ಗೌಂಡಿ ಅವರು ನಡೆಸಿದರು. ಅವರಿಗೆ ತನಿಖೆಯಲ್ಲಿ ಸಹಾಯಕರಾಗಿ ಸಿಪಿಸಿ-3703 ಮಂಜುನಾಥ ಮುಸಳಿ ಸಹಕರಿಸಿದರು. ತನಿಖೆ ಪೂರ್ಣಗೊಳಿಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಹಾಗೆಯೇ ನ್ಯಾಯಾಲಯದ ಕಾರ್ಯಚರಣೆಗೆ ಸಿಪಿಸಿ-3573 ಪ್ರವೀಣ ಹೊಂಡದ ಅವರು ಕರ್ತವ್ಯ ನಿರ್ವಹಿಸಿದರು.
ಈ ಪ್ರಕರಣದ ವಿಚಾರಣೆ ಬೆಳಗಾವಿಯ ವಿಶೇಷ ಪಾಕ್ಸೋ ನ್ಯಾಯಾಲಯದಲ್ಲಿ ಕೇವಲ ಒಂದು ವರ್ಷದೊಳಗೆ ಪೂರ್ಣಗೊಂಡಿತು. ವಿಚಾರಣೆ ವೇಳೆ ಆರೋಪಿಯು ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶ್ರೀಮತಿ ಸಿ. ಎಂ. ಪುಷ್ಪಲತಾ ಅವರು ಆರೋಪಿಗೆ 30 ವರ್ಷದ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಅವರು ಸರ್ಕಾರದ ಪರವಾಗಿ ಪರಿಣಾಮಕಾರಿವಾದ ಮಂಡಿಸಿದರು.
