Bailahongala

ರಾಣಿ ಕಿತ್ತೂರು ಚೆನ್ನಮ್ಮ ಸ್ಮಾರಕ ನಿರ್ಲಕ್ಷ್ಯ ಆರೋಪ: ಬೈಲಹೊಂಗಲ ಬಂದ್ ಯಶಸ್ವಿ ಮಾರ್ಚ್ 27ರ ಬೇಡಿಕೆ ಈಡೇರಿಕೆಗೆ ಗಡುವು!!!

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾಜಿಯ ಸ್ಮಾರಕ ಮತ್ತು ಅಭಿವೃದ್ಧಿ ಕಾಮಗಾರಿಗಳ ನಿರ್ಲಕ್ಷ್ಯ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಬೈಲಹೊಂಗಲ ಬಂದ್’ ಸಂಪೂರ್ಣ ಯಶಸ್ವಿಯಾಗಿದೆ. ಶಾಸಕರ ನಡೆ ಮತ್ತು ಸರ್ಕಾರದ ಧೋರಣೆ ವಿರೋಧಿಸಿ ವಿವಿಧ ಕನ್ನಡಪರ ಹಾಗೂ ರೈತಪರ ಸಂಘಟನೆಗಳು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದವು.

ಬೈಲಹೊಂಗಲ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ಮಾರಕ ಹಾಗೂ ಗೌರವದ ವಿಚಾರದಲ್ಲಿ ಸರ್ಕಾರ ಮತ್ತು ಸ್ಥಳೀಯ ಶಾಸಕರು ಉದಾಸೀನತೆ ತೋರುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳು ಒಗ್ಗೂಡಿ ನಡೆಸಿದ ಈ ಪ್ರತಿಭಟನೆಯಲ್ಲಿ, ಸ್ಮಾರಕದ ಗಾರ್ಡನ್ ಕಾಮಗಾರಿಯನ್ನು ತರಾತುರಿಯಲ್ಲಿ ಉದ್ಘಾಟಿಸಿ ಇತಿಹಾಸ ಮತ್ತು ಜನರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಮಾರಕದ ಅಭಿವೃದ್ಧಿಗೆ ಘೋಷಣೆಯಾದ ಅನುದಾನದ ಬಳಕೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಫ್ಲೋ
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ವಿ.ಐ. ಪಾಟೀಲ ಅವರು, ಇದು ಯಾವುದೇ ವ್ಯಕ್ತಿಗತ ವಿರೋಧವಲ್ಲ, ಬದಲಾಗಿ ಇತಿಹಾಸದ ಗೌರವವನ್ನು ಉಳಿಸುವ ಪ್ರಜಾಪ್ರಭುತ್ವದ ಹೋರಾಟವಾಗಿದೆ ಎಂದರು. ಗಾರ್ಡನ್ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗುತ್ತಿದ್ದರೂ, ಅಲ್ಲಿ ನಡೆದಿರುವ ಕಾಮಗಾರಿ ಕೇವಲ ಒಂದು ಕೋಟಿಯಷ್ಟು ಮಾತ್ರ ಕಾಣಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ ಶಾಸಕರು ಜನರ ಪ್ರಶ್ನೆಗಳಿಗೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮಾರ್ಚ್ 27ರವರೆಗೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿರುವ ಹೋರಾಟಗಾರರು, ರಾಣಿ ಚೆನ್ನಮ್ಮಾಜಿಯ ತ್ಯಾಗ ಮತ್ತು ಶೌರ್ಯಕ್ಕೆ ತಕ್ಕ ಗೌರವ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.

Tags:

error: Content is protected !!