ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಹಿರಿಯ ಆಯುರ್ವೇದ ವೈದ್ಯೆ, ಶತಾಯುಷಿ ಡಾ. ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ ಅವರು ಇಂದು ನಿಧನರಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲೇ ದೇಹದಾನದ ಬಗ್ಗೆ ಜಾಗೃತಿ ಮೂಡಿಸಿದ್ದ ಇವರು, ಇಂದು ತಮ್ಮ ದೇಹವನ್ನೇ ವೈದ್ಯಕೀಯ ಸಂಶೋಧನೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


ಬೈಲಹೊಂಗಲದ ಬಸವನಗರದ ನಿವಾಸಿ ಹಾಗೂ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ 101 ವರ್ಷದ ಡಾ. ಸುಶೀಲಾದೇವಿ ರಾಮಣ್ಣವರ ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಬಿ.ಎಸ್. ರಾಮಣ್ಣವರ ಅವರ ಧರ್ಮಪತ್ನಿಯಾಗಿದ್ದ ಇವರು, ಆಯುರ್ವೇದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. 18 ವರ್ಷಗಳ ಹಿಂದೆ ತಮ್ಮ ಪತಿಯ ದೇಹವನ್ನೇ ದಾನ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದ್ದ ಸುಶೀಲಾದೇವಿ ಅವರು, ಇಂದು ತಮ್ಮ ಅಂತಿಮ ಇಚ್ಛೆಯಂತೆ ತಮ್ಮ ದೇಹವನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದಾನವಾಗಿ ನೀಡಿದ್ದಾರೆ.

ತಮ್ಮ ಮಗ ಡಾ. ಮಹಾಂತೇಶ್ ರಾಮಣ್ಣವರ ಅವರೊಂದಿಗೆ ಸೇರಿ ರಾಜ್ಯಾದ್ಯಂತ ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನದ ಕುರಿತು ಜನರಲ್ಲಿ ಮನೆಮಾಡಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಇವರು ಶ್ರಮಿಸಿದ್ದರು. ಡಾ. ಸುಶೀಲಾದೇವಿ ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಶಾಸಕ ಮಹಾಂತೇಶ್ ಕೌಜಲಗಿ ಸೇರಿದಂತೆ ನಾಡಿನ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. ಆಯುರ್ವೇದ ವೈದ್ಯವಿಜ್ಞಾನ ಮತ್ತು ಸಮಾಜಕ್ಕೆ ಇವರು ನೀಡಿದ ಕೊಡುಗೆಯನ್ನು ಗಣ್ಯರು ಸ್ಮರಿಸಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಬೈಲಹೊಂಗಲದ ಚೆನ್ನಮ್ಮ ವೃತ್ತದಿಂದ ಮೆರವಣಿಗೆಯ ಮೂಲಕ ಇವರ ಪಾರ್ಥಿವ ಶರೀರವನ್ನು ಬೆಳಗಾವಿಯ ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇನ್ನು ಸುಶೀಲಾ ರಾಮನ್ನವರ ಅವರ ಅಂತ್ಯಯಾತ್ರೆಯೂ ಕೂಡ ದೇಹದಾನ, ಅಂಗಾಂಗ ದಾನ ಮತ್ತು ರಕ್ತದಾನದ ಜಾಗೃತಿಯ ಸಂದೇಶವನ್ನು ಸಾರಿತು. ಡಾ. ರಾಮನ್ನವರ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ಬಿ.ಎಂ.ಕಂಕಣವಾಡಿ ಆರ್ಯುವೇದಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇಹದಾನ, ರಕ್ತದಾನದ ಸಂದೇಶವನ್ನು ಸಾರುವ ಜಾಗೃತಿ ಫಲಕಗಳನ್ನು ಕೈಯಲ್ಲಿ ಹಿಡಿದು ಅಂತ್ಯಯಾತ್ರೆಯನ್ನು ನಡೆಸಿದರು. ಇದಕ್ಕೂ ಮೊದಲೂ ಧನ್ವಂತರಿ ಮಂತ್ರದೊಂದಿಗೆ ಇಹಲೋಕ ತ್ಯಜಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸುಶೀಲಾ ರಾಮನ್ನವರರ ಅವರಿಗೆ ಅಂತಿಮ ನಮನಗಳನ್ನು ಸಲ್ಲಿಸಲಾಯಿತು.
