Belagavi

ಕನಿಷ್ಠ ವೇತನ ಜಾರಿಗಾಗಿ ಸರ್ಕಾರದ ಮೊರೆ ಹೋದ ಅಂಗನವಾಡಿ ನೌಕರರ ಸಂಘ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ

Share

• ಕನಿಷ್ಠ ವೇತನ ಪರಿಷ್ಕರಣೆಗೆ ನೌಕರರ ಆಗ್ರಹ
• ಲಕ್ಷ್ಮೀ ಹೆಬ್ಬಾಳಕರರಿಗೆ ಸಲ್ಲಿಸಿದ ಮನವಿ ಪತ್ರ
• ಕಳೆದ ಏಳು ವರ್ಷದಿಂದ ಬಾಕಿಯಿರುವ ಪರಿಷ್ಕರಣೆ
• ಕೂಡಲೇ ಅಂತಿಮ ಅಧಿಸೂಚನೆ ಪ್ರಕಟಿಸಲು ಒತ್ತಾಯ

ರಾಜ್ಯದ ಅನುಸೂಚಿತ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ, ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಸಲ್ಲಿಸಿದೆ. ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ಈ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಘ ಆಗ್ರಹಿಸಿದೆ.
ಬೆಳಗಾವಿಯ ಕ್ರಾಂತಿ ನಗರದ ಸಂಘದ ವತಿಯಿಂದ ಸಚಿವರಿಗೆ ಸಲ್ಲಿಸಿದ ಮನವಿಯನ್ನು, ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಸ್ವೀಕರಿಸಿದರು. ರಾಜ್ಯ ಸರ್ಕಾರವು ಏಪ್ರಿಲ್ 2025ರಲ್ಲಿ ಪ್ರಕಟಿಸಿದ್ದ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಉಲ್ಲೇಖಿಸಲಾಗಿದೆ. ಕನಿಷ್ಠ ವೇತನ ಸಲಹಾ ಮಂಡಳಿಯು ವರದಿ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿದ್ದರೂ, ಅಂತಿಮ ಅಧಿಸೂಚನೆ ಹೊರಬೀಳದಿರುವುದು ಸಾವಿರಾರು ಕಾರ್ಮಿಕರ ಪಾಲಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ ಎಂದು ಸಂಘದ ಅಧ್ಯಕ್ಷೆ ಮಂದಾ ನೇವಗಿ ತಿಳಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ವೇತನ ಪರಿಷ್ಕರಣೆ ಆಗದಿರುವುದು ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಇತ್ತೀಚಿನ ಕೇಂದ್ರ ಸರ್ಕಾರದ ಅಧಿಸೂಚನೆ ಹಾಗೂ ಉಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಕಾನೂನಾತ್ಮಕ ತೊಡಕುಗಳಿಲ್ಲದಿರುವುದರಿಂದ, ಸರ್ಕಾರವು ಕೂಡಲೇ ಕಾರ್ಮಿಕರ ಹಿತದೃಷ್ಟಿಯಿಂದ ವೇತನವನ್ನು ಪರಿಷ್ಕರಿಸಬೇಕು ಎಂದು ಸಂಘ ಒತ್ತಾಯಿಸಿದೆ. ಸದನದಲ್ಲಿ ಈ ವಿಚಾರವನ್ನು ಚರ್ಚಿಸಿ, ವೈಜ್ಞಾನಿಕ ವೇತನ ಶ್ರೇಣಿಯನ್ನು ಜಾರಿಗೆ ತರುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸುಶೀಲಾ ತಳವಾರ, ಮೀನಾಕ್ಷಿ ದಪಡೆ, ಸುವರ್ಣ ಮೋರೆ, ಸುನಿತಾ ಚನ್ನಬಸಪ್ಪನ್ನವರ, ಶೋಭಾ ಕಾಕತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!