• ಭಾರತಕ್ಕೆ ಒಲಿದ ಮೂರನೇ ವಿಶ್ವಕಪ್ ಕಿರೀಟ
• ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಹೀನಾಯ ಸೋಲು
• ಜಮಖಂಡಿ ಶಿವಾಜಿ ಸರ್ಕಲ್‌ನಲ್ಲಿ ಪಟಾಕಿ ಸಂಭ್ರಮ
• ಬಾಗಲಕೋಟೆ ಜಿಲ್ಲೆಯಾದ್ಯಂತ ಹರಿದ ವಿಜಯೋತ್ಸವದ ಅಲೆ

ಟಿ-20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಜಯದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಇಡೀ ನಗರವೇ ಹಬ್ಬದ ಆವರಣದಂತೆ ಕಂಗೊಳಿಸುತ್ತಿದೆ.
ಟಿ-20 ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಧೂಳೀಪಟ ಮಾಡಿದ ಭಾರತ ತಂಡ, ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡು ಹೊಸ ಇತಿಹಾಸ ಬರೆದಿದೆ. ಪಂದ್ಯದ ಕೊನೆಯ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಈ ಹಣಾಹಣಿಯಲ್ಲಿ ಭಾರತದ ಅಮೋಘ ಪ್ರದರ್ಶನ ಕಂಡು ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಗೆಲುವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ದೇಶದಾದ್ಯಂತ ಸಂಭ್ರಮ ಮನೆ ಮಾಡಿದ್ದು, ನೀಲಿ ಪಡೆಯ ಸಾಧನೆಗೆ ಕ್ರೀಡಾ ಲೋಕವೇ ಬೆರಗಾಗಿದೆ.
ಗೆಲುವಿನ ಅಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲೂ ಜೋರಾಗಿತ್ತು. ನಗರದ ಪ್ರಮುಖ ಕೇಂದ್ರವಾದ ಛತ್ರಪತಿ ಶಿವಾಜಿ ಮಹಾರಾಜ್ ಸರ್ಕಲ್‌ನಲ್ಲಿ ನೂರಾರು ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿ ಬೃಹತ್ ಗಾತ್ರದ ಪಟಾಕಿಗಳನ್ನು ಸಿಡಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ” ಎಂದು ಘೋಷಣೆ ಕೂಗುತ್ತಾ ಯುವಕರು ನೃತ್ಯ ಮಾಡಿದರು. ಜಮಖಂಡಿ ನಗರದ ರಸ್ತೆ ರಸ್ತೆಗಳಲ್ಲಿ ಟೀಮ್ ಇಂಡಿಯಾ ಫ್ಯಾನ್ಸ್ ವಿಜಯೋತ್ಸವ ಆಚರಿಸುವ ಮೂಲಕ ತಮ್ಮ ನೆಚ್ಚಿನ ತಂಡದ ಜಯವನ್ನು ಅದ್ದೂರಿಯಾಗಿ ಸಂಭ್ರಮಿಸಿದರು.
