Vijaypura

ಬಿಸಿಲೂರಿನಲ್ಲಿ ಹೆಚ್ಚಾದ ತಾಪಮಾನ; ಇನ್ನೂ ಎರಡು ತಿಂಗಳಿನ ಬಿಸಿಲಿನ ತಾಪಕ್ಕೆ ಚಿಂತಾಕ್ರಾಂತ ಜನತೆ

Share

ಬಿಸಿಲೂರು ವಿಜಯಪುರ ನಗರದಲ್ಲಿ ಇದೀಗ ಬಿಸಿಲು ಹೆಚ್ಚಾಗುತ್ತಿದೆ. ಬೆಳ್ಳಂಬೆಳಿಗ್ಗೆ ಬಿಸಿಲಿನ ತಾಪ ಏರಹತ್ತಿದೆ. ಅತಿ ಹೆಚ್ಚು ತಾಪಮಾನದಿಂದ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ 6 ದಿನಗಳ ಕಾಲ ಬಿಸಿಗಾಳಿ ಪರಿಣಾಮ ಹೆಚ್ಚಾಗಲಿದೆ ಎಂದು ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲಾಡಳಿತವು ವಿಜಯಪುರ ಜಿಲ್ಲೆಯ ಜನತೆಗೆ ಒಂದಿಷ್ಟು ಸಲಹೆಗಳನ್ನು ನೀಡಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು.. ವಿಜಯಪುರ ಜಿಲ್ಲೆಯಲ್ಲಿ ಇದೀಗ ಅತಿಹೆಚ್ಚು ತಾಪಮಾನವಿದೆ. ಹೀಗಾಗಿ ಅತಿಹೆಚ್ಚು ತಾಪಮಾನ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ನೀಡಲಾದ ಸಲಹೆ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯದ ಕೆಲ ಜಿಲ್ಲೆಗಳಲ್ಲಿ 3 ರಿಂದ 6 ದಿನಗಳವರೆಗೆ ಬಿಸಿಗಾಳಿಯ ಪ್ರಭಾವ ಕಂಡುಬರುವ ಸಾಧ್ಯತೆಯಿದೆ. ತೀವ್ರ ತಾಪಮಾನವು ಸಾರ್ವಜನಿಕರ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ತಡೆಗಟ್ಟಲು ಸಾರ್ವಜನಿಕರು ಗಮನ ಹರಿಸಬೇಕು” ಎಂದು ತಿಳಿಸಿದ್ದಾರೆ. ಇನ್ನೂ ಗರಿಷ್ಠ ತಾಪಮಾನದ ಅವಧಿಯಲ್ಲಿ ಅದರಲ್ಲೂ ಮಧ್ಯಾಹ್ನ 12 ರಿಂದ 3ರವರೆಗೆ ಹೆಚ್ಚು ಬಿಸಿಲಿರುವ ಕಾರಣ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವ ಅನಿವಾರ್ಯತೆಯಿದ್ದರೆ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ಉಷ್ಣತೆ ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ನಿಲ್ಲಿಸಬೇಕು” ಎಂದು ಸಲಹೆ ನೀಡಿದ್ದಾರೆ.

ಇನ್ನೂ ಮುಂಜಾನೆ 11 ರಿಂದ ಸಂಜೆ 4ರ ಅವಧಿಯಲ್ಲಿ ಹೊರಾಂಗಣ ಸಭೆಗಳು, ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕು. ಸಭಿಕರಿಗೆ ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ನೀರಿನಂಶ ಹೊಂದಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ತರಕಾರಿ ಸೊಪ್ಪು, ಎಳನೀರು ಹೆಚ್ಚಾಗಿ ಸೇವಿಸಬೇಕು. ಜತೆಗೆ ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರಿಡಬೇಕು. ಮನೆ ತಂಪಾಗಿರಿಸಲು ಪರದೆ, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಹೊರಗೆ ಕವರ್, ಹ್ಯಾಂಡ್ ಟವೆಲ್, ಹ್ಯಾಂಡ್ ಫ್ಯಾನ್ ಕಿಟ್ ಒಯ್ಯಬೇಕು” ಎಂದಿದ್ದಾರೆ. ಅಲ್ಲದೇ ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು” ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

ಒಟ್ಟಾರೆ ವಿಜಯಪುರ ನಗರದಲ್ಲಿ ಬಿಸಿಲೂರಿನಲ್ಲಿ ಇದೀಗ ಬಿಸಿಲು ಹೆಚ್ಚಾಗಿದ್ದು ಸಾರ್ವಜನಿಕರು ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಜಿಲ್ಲಾಡಳಿತ ಪ್ರಕಟಣೆ ನೀಡುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡಲು ಮುಂದಾಗಿದೆ. ಇನ್ನೂ ಎರಡು ತಿಂಗಳು ಬಿಸಿಲು ಇರಲಿದ್ದು ಅದ್ಯಾಗೆ ಸಹಿಸಿಕೊಳ್ಳುವದು ಎಂದು ಸಾರ್ವಜನಿಕರ ಚಿಂತೆಯಾಗಿದೆ.

 

Tags:

error: Content is protected !!