Bagalkote

ಬಾಗಲಕೋಟೆಯಲ್ಲಿ ಬೀದಿ ಗೂಳಿಗಳ ಅಬ್ಬರ: ನವನಗರದ ನಡುರಸ್ತೆಯಲ್ಲಿ ಕಾಳಗ!!! ವಾಹನ ಸವಾರರು ಕಂಗಾಲು !!

Share

• ಬಾಗಲಕೋಟೆ ನಗರದಲ್ಲಿ ಬೀದಿ ದನಗಳ ಹಾವಳಿ
• ಕಾಳಿದಾಸ ಸರ್ಕಲ್‌ನಲ್ಲಿ ಗೂಳಿಗಳ ಭೀಕರ ಕಾಳಗ
• ನಡುರಸ್ತೆಯಲ್ಲಿ ಗುದ್ದಾಡಿದ ಮದವೇರಿದ ಬೀದಿ ಗೂಳಿಗಳು
• ವಾಹನ ಸವಾರರಲ್ಲಿ ಆತಂಕ, ಸಂಚಾರಕ್ಕೆ ಅಡ್ಡಿ

ಬಾಗಲಕೋಟೆ ನಗರದಲ್ಲಿ ಬೀದಿ ದನಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ನವನಗರದ ಪ್ರಮುಖ ವೃತ್ತವೊಂದರಲ್ಲಿ ಮದವೇರಿದ ಗೂಳಿಗಳು ನಡುರಸ್ತೆಯಲ್ಲೇ ಕಾಳಗಕ್ಕಿಳಿದಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಭೀತಿಯಿಂದ ಪರದಾಡುವಂತಾಗಿದೆ.

ಬಾಗಲಕೋಟೆಯ ನವನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಕಾಳಿದಾಸ ಸರ್ಕಲ್ ಬಳಿ ಇಂದು ಮಧವೇರಿದ ಬೀದಿ ಗೂಳಿಗಳು ಭೀಕರವಾಗಿ ಗುದ್ದಾಡಿಕೊಂಡಿವೆ. ರಸ್ತೆಯ ಮಧ್ಯಭಾಗದಲ್ಲೇ ಎರಡು ಗೂಳಿಗಳು ಪರಸ್ಪರ ಶಕ್ತಿ ಪ್ರದರ್ಶನಕ್ಕಿಳಿದಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಈ ಕಾಳಗವನ್ನು ಕಂಡು ದಾರಿ ಬಿಟ್ಟು ಆಚೆ ಸರಿಯಬೇಕಾಯಿತು. ಸ್ಥಳೀಯರು ಹರಸಾಹಸ ಪಟ್ಟು ಗೂಳಿಗಳನ್ನು ಚದುರಿಸಲು ಯತ್ನಿಸಿದರೂ ಸಹ, ಗೂಳಿಗಳು ಮಾತ್ರ ಕಿಂಚಿತ್ತೂ ಹಿಂದೆ ಸರಿಯದೆ ಕಾದಾಟ ಮುಂದುವರಿಸಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.
ನಗರದ ಪ್ರಮುಖ ವೃತ್ತಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಬೀದಿ ದನಗಳ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕರ ನಿದ್ದೆಗೆಡಿಸಿದೆ. ಮದವೇರಿದ ಗೂಳಿಗಳ ಕಾಳಗದಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬೀದಿ ದನಗಳನ್ನು ನಿಯಂತ್ರಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಡುರಸ್ತೆಯಲ್ಲಿ ನಡೆದ ಈ ಗೂಳಿ ಕಾಳಗದ ದೃಶ್ಯಗಳು ಈಗ ಬಾಗಲಕೋಟೆ ನಗರಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!