ರಂಗಪಂಚಮಿಯ ಬಣ್ಣದ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಇಂದು ತೀವ್ರ ದುಃಖ ಆವರಿಸಿದೆ. ಖಾನಾಪುರದ ಮಲಪ್ರಭಾ ನದಿಯಲ್ಲಿ ಈಜು ಕಲಿಯಲು ಹೋಗಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ವರದಿಯಾಗಿದೆ.
ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ನಿವಾಸಿ, 24 ವರ್ಷದ ಸಂತೋಷ್ ಸಾತೇರಿ ಬಿರ್ಜೆ ಮೃತ ದುರ್ದೈವಿ. ರಂಗಪಂಚಮಿ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಮಲಪ್ರಭಾ ನದಿ ತೀರಕ್ಕೆ ತೆರಳಿದ್ದ ಸಂತೋಷ್, ಈಜಲು ನದಿಗಿಳಿದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಅಂತಿಮವಾಗಿ ಯುವಕನ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಮೃತ ಯುವಕ ಅಣಬೆ ಕೃಷಿ ಉದ್ಯಮಿಯಾಗಿದ್ದು, ಗರ್ಲಗುಂಜಿ ಪಿಕೆಪಿಎಸ್ ಸೊಸೈಟಿಯ ಕಾರ್ಯದರ್ಶಿ ಸಾತೇರಿ ಬಿರ್ಜೆ ಅವರ ಪುತ್ರನಾಗಿದ್ದನು. ರಂಗಪಂಚಮಿಯ ದಿನವೇ ನಡೆದ ಈ ಅನಿರೀಕ್ಷಿತ ದುರ್ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಹಬ್ಬದ ಸಂಭ್ರಮವು ಶೋಕದಲ್ಲಿ ಅಂತ್ಯಗೊಂಡಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

