ಗುತ್ತಿಗೆದಾರರ ಪ್ರತಿಭಟನೆಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯ 32 ಸಾವಿರ ಕೋಟಿ ರೂಪಾಯಿ ಬಾಕಿ ಹಣವನ್ನು ನಮ್ಮ ಸರ್ಕಾರವೇ ಪಾವತಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಗುತ್ತಿಗೆದಾರರು ನಡೆಸುತ್ತಿರುವ ಪ್ರತಿಭಟನೆ ನ್ಯಾಯಸಮ್ಮತವಾಗಿದೆ ಎಂದು ಹೇಳಿದ್ದಾರೆ. ಕಳೆದ 4-5 ವರ್ಷಗಳಿಂದ ಗುತ್ತಿಗೆದಾರರು ತಮ್ಮ ಸ್ವಂತ ಹಣ ಹಾಕಿ ಸರ್ಕಾರಿ ಕಾಮಗಾರಿಗಳನ್ನು ಪೂರೈಸಿದ್ದಾರೆ. ಈ ಹಿಂದಿನ ಬೊಮ್ಮಾಯಿ ಅವರ ಸರ್ಕಾರ ಬರೋಬ್ಬರಿ 32 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿದ್ದು, ಗುತ್ತಿಗೆದಾರರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ ಎಂದು ಅವರು ತಿಳಿಸಿದರು. ಈಗಾಗಲೇ ಉಪ ಮುಖ್ಯಮಂತ್ರಿಗಳು ಗುತ್ತಿಗೆದಾರರಿಗೆ ಸಾಂತ್ವನ ಹೇಳಿದ್ದು, ಸಮಸ್ಯೆ ಬಗೆಹರಿಸುವ ವಿಶ್ವಾಸ ನೀಡಿದ್ದಾರೆ.
ಹಳೆಯ ಬಾಕಿ ಹಣವನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡುವುದಕ್ಕಾಗಿಯೇ ನಮ್ಮ ಸರ್ಕಾರ ಪ್ರಸ್ತುತ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿಲ್ಲ ಎಂದು ಸವದಿ ಸ್ಪಷ್ಟಪಡಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಬಾಕಿ ಇರುವ ಎಲ್ಲಾ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗುವುದು. ಗುತ್ತಿಗೆದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಾಸಕರ ಈ ಹೇಳಿಕೆ ಇದೀಗ ಗುತ್ತಿಗೆದಾರರ ವಲಯದಲ್ಲಿ ಹೊಸ ಆಶಾವಾದ ಮೂಡಿಸಿದೆ.
