ಬೆಳಗಾವಿಯ ಪ್ರಮುಖ ಭಾಗಗಳಲ್ಲಿ ಕಳೆದ ಮಧ್ಯರಾತ್ರಿಯಿಂದಲೇ ವಿದ್ಯುತ್ ಸಂಚಾರ ಕಡಿತಗೊಂಡಿದೆ. ಇಂಡೋಲ್‌ನಿಂದ ಸರಬರಾಜಾಗುವ 110 ಕೆವಿ ಹೈ-ಟೆನ್ಷನ್ ಲೈನ್ ಕಟ್ ಆಗಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಸುಡುವ ಬಿಸಿಲನ್ನು ಲೆಕ್ಕಿಸದೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.”

ಇಂಡಾಲ್ ಕೇಂದ್ರದಿಂದ ಸರಬರಾಜಾಗುವ 110 ಕೆವಿ ಮುಖ್ಯ ವಿದ್ಯುತ್ ಲೈನ್ ಕಟ್ ಆದ ಹಿನ್ನೆಲೆಯಲ್ಲಿ ಬೆಳಗಾವಿಯ ಹಲಗಾ ವಿಧಾನಸಭಾ ಕ್ಷೇತ್ರ, ಮಚ್ಚೆ ಕೈಗಾರಿಕಾ ಪ್ರದೇಶ ಹಾಗೂ ವಡಗಾಂವ್ ವ್ಯಾಪ್ತಿಯಲ್ಲಿ ಸಂಪೂರ್ಣ ವಿದ್ಯುತ್ ಸ್ಥಗಿತಗೊಂಡಿದೆ. ಭಾನುವಾರ ಬೆಳಗಿನ ಜಾವ 3 ಗಂಟೆಯಿಂದಲೇ ಕಾರ್ಯಪ್ರವೃತ್ತರಾಗಿರುವ ಕೆಪಿಟಿಸಿಎಲ್ ಸಿಬ್ಬಂದಿ ಮತ್ತು ಅಧಿಕಾರಿಗಳು, ಬಿ.ಎಸ್. ಯಡಿಯೂರಪ್ಪ ರಸ್ತೆಯಲ್ಲಿರುವ ಬೃಹತ್ ವಿದ್ಯುತ್ ಕಂಬಗಳನ್ನೇರಿ ಲೈನ್ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಟಿಎಲ್‌ಎಂ ವಿಭಾಗದ ಸೆಕ್ಷನ್ ಆಫೀಸರ್ ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಈ ಬೃಹತ್ ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಸುಡುತ್ತಿರುವ ಅತೀವ ಬಿಸಿಲಿದ್ದರೂ ಸಹ, ಸಾರ್ವಜನಿಕರ ಹಿತದೃಷ್ಟಿಯಿಂದ ಇಲಾಖೆಯ ಸಿಬ್ಬಂದಿ ತೋರುತ್ತಿರುವ ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿ ನಗರದ ಕತ್ತಲೆಯನ್ನು ಹೋಗಲಾಡಿಸಲು ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆಯಾಗುವ ನಿರೀಕ್ಷೆಯಿದೆ.
