ಸಾಮಾನ್ಯವಾಗಿ ಕಠಿಣ ಕರ್ತವ್ಯದಲ್ಲಿ ನಿರತರಾಗಿರುವ ಜಿಲ್ಲೆಯ ಉನ್ನತ ಅಧಿಕಾರಿಗಳು ಇಂದು ಕೆಲಸದ ಒತ್ತಡ ಮರೆತು ಹೋಳಿ ಸಂಭ್ರಮದಲ್ಲಿ ಮಿಂದೆದ್ದರು. ಬಾಗಲಕೋಟೆ ಎಸ್.ಪಿ ಸಿದ್ದಾರ್ಥ ಗೋಯೆಲ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಬಣ್ಣದ ಹಬ್ಬದ ಓಕುಳಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮಸ್ತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದರು.


ಬಾಗಲಕೋಟೆ ಎಸ್.ಪಿ ಸಿದ್ದಾರ್ಥ ಗೋಯೆಲ್ ಅವರ ನಿವಾಸದಲ್ಲಿ ಇಂದು ರಂಗಪಂಚಮಿಯ ಸಡಗರ ಮುಗಿಲು ಮುಟ್ಟಿತ್ತು. ಅಧಿಕಾರಿಗಳ ನಿವಾಸದ ಆವರಣದಲ್ಲಿಯೇ ವಿಶೇಷ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸಂಗಪ್ಪ, ಎಸ್.ಪಿ ಸಿದ್ದಾರ್ಥ ಗೋಯೆಲ್, ಜಿ.ಪಂ ಸಿಇಒ ಶಶಿಧರ ಕುರೇರ ಮತ್ತು ಡಿವೈಎಸ್ಪಿ ಗಜಾನನ ಸುತಾರ ಸೇರಿದಂತೆ ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳು ಬಣ್ಣದ ಓಕುಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕನ್ನಡ ಚಲನಚಿತ್ರಗಳ ಜನಪ್ರಿಯ ಹಾಡುಗಳಿಗೆ ಉನ್ನತ ಅಧಿಕಾರಿಗಳು ಕುಣಿದು ಕುಪ್ಪಳಿಸಿದ ದೃಶ್ಯಗಳು ಎಲ್ಲರಲ್ಲೂ ಅಚ್ಚರಿ ಮತ್ತು ಸಂತಸ ಮೂಡಿಸಿದವು. ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಪೊಲೀಸ್ ಸಿಬ್ಬಂದಿ ಕೂಡ ಈ ಬಣ್ಣದ ಹಬ್ಬದಲ್ಲಿ ಭಾಗವಹಿಸಿ, ಪರಸ್ಪರ ಬಣ್ಣ ಹಚ್ಚುವ ಮೂಲಕ ಸೌಹಾರ್ದತೆಯಿಂದ ರಂಗಪಂಚಮಿ ಆಚರಿಸಿದರು. ಜನರ ರಕ್ಷಣೆಗಾಗಿ ದಿನವಿಡೀ ದುಡಿಯುವ ಅಧಿಕಾರಿಗಳು ಇಂದು ಹಬ್ಬದ ಸಂಭ್ರಮದಲ್ಲಿ ಮಕ್ಕಳಂತೆ ಮಿಂದೆದ್ದು ಎಲ್ಲರ ಗಮನ ಸೆಳೆದರು.
