Belagavi

11 ವರ್ಷದ ಬಾಲಕಿಯ ಕಣ್ಣಿಗೆ ಬಿದ್ದ ಐತಿಹಾಸಿಕ ಶಿಲಾಶಾಸನ; ಬೆಳವಡಿ ಮಲ್ಲಮ್ಮನ ಕಥನ ಅನಾವರಣ!

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಪುಟ್ಟ ಬಾಲಕಿಯೊಬ್ಬಳ ಜಾಗರೂಕತೆ ಇತಿಹಾಸವನ್ನೇ ಹೊರಹಾಕಿದೆ. ದೇವಸ್ಥಾನವೊಂದರಲ್ಲಿ ದೈವದ ರೂಪ ಎಂದು ನಂಬಲಾಗಿದ್ದ ಕಲ್ಲು, ವಾಸ್ತವದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ಶೌರ್ಯವನ್ನು ಸಾರುವ ಶಿಲಾಶಾಸನ ಎಂದು ಗುರುತಿಸಲಾಗಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ಈ ಐತಿಹಾಸಿಕ ಮಹತ್ವದ ಶಿಲಾಶಾಸನ ಪತ್ತೆಯಾಗಿದೆ. 11 ವರ್ಷದ ಲಕ್ಷ್ಮೀ ಹುಂಬಿ ಎಂಬ ಬಾಲಕಿ ತನ್ನ ತಂದೆಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ, ಅಲ್ಲಿನ ಕಲ್ಲಿನ ಮೇಲಿನ ಕೆತ್ತನೆಗಳನ್ನು ಗಮನಿಸಿದ್ದಾಳೆ. ಈ ಕಲ್ಲಿನಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮನ ವೀರಗಾಥೆಯ ದೃಶ್ಯಗಳು ಕೆತ್ತಲ್ಪಟ್ಟಿರುವುದನ್ನು ಆಕೆ ತಕ್ಷಣವೇ ಗುರುತಿಸಿ ತನ್ನ ತಂದೆಗೆ ತೋರಿಸಿದ್ದಾಳೆ.
ಈ ಶಿಲಾಶಾಸನವು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯವು ಬೆಳವಡಿ ಮಲ್ಲಮ್ಮನ ಗೋವುಗಳನ್ನು ಅಪಹರಿಸಿದಾಗ, ಆಕೆ ಅವುಗಳನ್ನು ಮರಳಿ ತರಲು ನಡೆಸಿದ ಹೋರಾಟವನ್ನು ಸುಂದರವಾಗಿ ಕೆತ್ತಲಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಐತಿಹಾಸಿಕ ಮಹತ್ವದ ಶಿಲಾಶಾಸನವನ್ನು ಇಷ್ಟು ದಿನಗಳ ಕಾಲ ಗ್ರಾಮಸ್ಥರು ಶನಿದೇವರು ಎಂದು ನಂಬಿ ಪೂಜಿಸುತ್ತಿದ್ದರು. ಬಾಲಕಿಯೊಬ್ಬಳ ಸೂಕ್ಷ್ಮ ಅವಲೋಕನದಿಂದ ಈಗ ಇತಿಹಾಸದ ಹೊಸ ಪುಟ ತೆರೆದುಕೊಂಡಂತಾಗಿದೆ.

ಪುಟ್ಟ ಬಾಲಕಿಯ ಈ ಐತಿಹಾಸಿಕ ಜ್ಞಾನ ಮತ್ತು ಗುರುತಿಸುವಿಕೆಯನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತಿಹಾಸವನ್ನು ಸಂರಕ್ಷಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟ ಲಕ್ಷ್ಮೀ ಹುಂಬಿಯನ್ನು ಗ್ರಾಮದ ಜನರು ಸನ್ಮಾನಿಸಿ, ಗೌರವಿಸಿದ್ದಾರೆ. ಮರೆತುಹೋಗಿದ್ದ ನಮ್ಮ ಇತಿಹಾಸದ ಕೊಂಡಿಯೊಂದನ್ನು ಬಾಲಕಿ ಪತ್ತೆ ಹಚ್ಚಿದ್ದು, ಈಗ ಇಡೀ ಗ್ರಾಮದಲ್ಲಿ ಹೆಮ್ಮೆಯ ವಿಷಯವಾಗಿದೆ.

Tags:

error: Content is protected !!