Belagavi

ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 37 ವರ್ಷ ಕಠಿಣ ಕಾರಾಗೃಹ ವಾಸ, ದಂಡ ವಿಧಿಸಿ ತೀರ್ಪು

Share

• ಪೋಕ್ಸೋ ಪ್ರಕರಣದ ಆರೋಪಿಗೆ 37 ವರ್ಷ ಶಿಕ್ಷೆ
• ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಶಿಕ್ಷೆ
• ವಾದ ಮಂಡಿಸಿ ನ್ಯಾಯ ಒದಗಿಸಿದ ಸರ್ಕಾರಿ ವಕೀಲರು
• ತನಿಖಾ ತಂಡದ ಕಾರ್ಯಕ್ಕೆ ಆಯುಕ್ತರ ಭಾರಿ ಮೆಚ್ಚುಗೆ

ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮಾನವೀಯ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ ನ್ಯಾಯಾಲಯ ಬರೋಬ್ಬರಿ 37 ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರಲ್ಲಿ ದಾಖಲಾಗಿದ್ದ ಗಂಭೀರ ಪೋಕ್ಸೋ ಪ್ರಕರಣದ ಆರೋಪಿ ರುತೇಶ ಅನಿಲ್ ಭೋಸಲೆ (22) ಎಂಬಾತನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್.ಟಿ.ಎನ್.ಸಿ-01 ನ್ಯಾಯಾಧೀಶರಾದ ಶ್ರೀಮತಿ ಸಿ.ಎಂ. ಪುಷ್ಪಲತಾ ಅವರು 37 ವರ್ಷಗಳ ಕಾರಾಗೃಹ ವಾಸ ಮತ್ತು 1,25,000 ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಆರೋಪಿಯು ಲಡ್ಡು ಕೊಡುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಲ್ಲದೆ, ಯಾರಿಗಾದರೂ ಹೇಳಿದರೆ ಜೀವ ಬೆದರಿಕೆ ಹಾಕಿದ್ದನು. ನಂತರವೂ ಬಾಲಕಿಯ ಶಾಲಾ ರಜೆಯ ಸಮಯವನ್ನು ಬಳಸಿಕೊಂಡು ಮರುಬಾರಿಯೂ ಕೃತ್ಯ ಎಸಗಿದ್ದನು.
ಈ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾಕತಿ ಠಾಣೆಯ ಪಿ.ಐ ಸುರೇಶ ಪಿ. ಶಿಂಗಿ ಮತ್ತು ತಂಡವು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿತ್ತು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ವಿ. ಪಾಟೀಲ ಅವರು ಸಮರ್ಥವಾಗಿ ವಾದ ಮಂಡಿಸಿ, ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಂಡರು. ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಪಿ.ಎಸ್.ಐಗಳಾದ ಮಂಜುನಾಥ ಹುಲಕುಂದ, ಮೃತ್ಯುಂಜಯ ಮಠದ ಹಾಗೂ ತನಿಖಾ ಸಹಾಯಕರ ತಂಡದ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ವಿಶೇಷವಾಗಿ ಶ್ಲಾಘಿಸಿದ್ದಾರೆ. ಈ ತೀರ್ಪು ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಾಲಯದ ಕಠಿಣ ನಿಲುವನ್ನು ಎತ್ತಿ ತೋರಿಸಿದೆ.

Tags:

error: Content is protected !!