• ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಸಂಭ್ರಮ ಜೋರು.
• ಡಿಜೆ ತಾಳಕ್ಕೆ ಕುಣಿದು ಕುಪ್ಪಳಿಸಿದ ಜನತೆ.
• ಕಾಮಣ್ಣನ ದಹನದೊಂದಿಗೆ ಹಬ್ಬದ ಸಮಾಪ್ತಿ ಆಚರಣೆ.
• ಬಿಗಿ ಬಂದೋಬಸ್ತ್ ನಡುವೆ ಬಣ್ಣದೋಕುಳಿ ಸಂಭ್ರಮ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಂಗ ಪಂಚಮಿಯ ಸಂಭ್ರಮ ಮುಗಿಲು ಮುಟ್ಟಿದೆ. ಬಣ್ಣದೋಕುಳಿಯೊಂದಿಗೆ ಡಿಜೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸುತ್ತಿದ್ದರೆ, ಇನ್ನೊಂದೆಡೆ ಪರಂಪರಾಗತ ಕಾಮಣ್ಣನ ಹಬ್ಬದ ಮೆರುಗು ಎಲ್ಲೆಡೆ ಕಂಡು ಬಂದಿತು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಹಬ್ಬವು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿದೆ. ನಗರದ ತೋಳಕೆರೆ ವೃತ್ತ ಸೇರಿದಂತೆ ದೇಶಪಾಂಡೆ ನಗರ, ಹೊಸೂರು ಮುಂತಾದ ಪ್ರಮುಖ ವೃತ್ತಗಳಲ್ಲಿ ಯುವಕರು ಮತ್ತು ಯುವತಿಯರು ಡಿಜೆ ಮ್ಯೂಸಿಕ್‌ನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಹಿಳೆಯರು ಮತ್ತು ಯುವತಿಯರಿಗಾಗಿ ಪ್ರತ್ಯೇಕ ಗ್ರೀಲ್ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿಶೇಷವಾಗಿ ಕಾಂಗ್ರೆಸ್ ಮುಖಂಡ ಅನಿಲ ಕುಮಾರ ಪಾಟೀಲ ಅವರು ಹಾಡಿದ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ದಿವಂಗತ ನಟ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ‘ಕಾಣದಂತೆ ಮಾಯವಾದನೋ’ ಹಾಡಿಗೆ ಜನರು ಭಾವಪೂರ್ಣವಾಗಿ ನೃತ್ಯ ಮಾಡಿ ಗೌರವ ಸಲ್ಲಿಸಿದರು.
ಐದು ದಿನಗಳ ಕಾಲ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದ ಭಕ್ತರು, ಐದನೇ ದಿನದಂದು ಕಾಮಣ್ಣ ಮೂರ್ತಿಯನ್ನು ದಹಿಸುವ ಮೂಲಕ ವಿಧ್ಯುಕ್ತವಾಗಿ ಬಣದೋಕೂಳಿ ಆಚರಿಸಿದರು. ಹುಬ್ಬಳ್ಳಿಯ ಪ್ರತಿ ಗಲ್ಲಿಯಲ್ಲೂ ಬಣ್ಣದೋಕುಳಿಯಾಟ ಜೋರಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣದಲ್ಲಿ ಮಿಂದೆದ್ದು, ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸುವ ಮೂಲಕ ವಾಣಿಜ್ಯ ನಗರಿಯು ಬಣ್ಣದ ಲೋಕವಾಗಿ ಮಾರ್ಪಟ್ಟಿತ್ತು.
