• ರಾಮತೀರ್ಥನಗರದ ಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆ
• ಎಐ ತಂತ್ರಜ್ಞಾನದ ಕಲಿಕೆಗೆ ಸರ್ಕಾರಿ ಶಾಲೆ ಸಜ್ಜು
• ಹೆಚ್ಚುವರಿ ಐದು ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ
• ಪಿಯುಸಿ ಶಿಕ್ಷಣ ಪ್ರಾರಂಭಿಸಲು ಶಾಲೆಯಲ್ಲಿ ಭರ್ಜರಿ ಸಿದ್ಧತೆ

ಬೆಳಗಾವಿಯ ರಾಮತೀರ್ಥನಗರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭವಾಗಿದೆ. ಕೊಠಡಿಗಳ ಕೊರತೆಯನ್ನು ನೀಗಿಸುವುದರ ಜೊತೆಗೆ, ಸರ್ಕಾರಿ ಶಾಲಾ ಮಕ್ಕಳಿಗೆ ಭವಿಷ್ಯದ ತಂತ್ರಜ್ಞಾನವಾದ ಎಐ (AI) ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ಕೆಪಿಸಿ ಶಾಲೆಯ 7 ನೂತನ ಬೋಧನಾ ಕೊಠಡಿಗಳನ್ನು ಉತ್ತರ ಶಾಸಕ ಆಸೀಫ್ ಸೇಠ್ ಅವರು ಲೋಕಾರ್ಪಣೆಗೊಳಿಸಿದರು.
ಬೆಳಗಾವಿಯ ರಾಮತೀರ್ಥನಗರದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿಗೆ ದೊಡ್ಡ ವೇಗ ಸಿಕ್ಕಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಶಾಲೆಯಲ್ಲಿ 7 ಹೊಸ ಬೋಧನಾ ಕೊಠಡಿಗಳು ಮತ್ತು ಸುಸಜ್ಜಿತ ವಿಜ್ಞಾನ ಪ್ರಯೋಗಾಲಯವನ್ನು ಉತ್ತರ ಶಾಸಕ ಆಸೀಫ್ ಸೇಠ್ ಅವರು ಉದ್ಘಾಟಿಸಿದರು.
ಈ ಹಿಂದೆ ಶಾಲೆಯಲ್ಲಿ ಇದ್ದ ಕೊಠಡಿಗಳ ಕೊರತೆಯನ್ನು ನೀಗಿಸುವಂತೆ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಬಿಇಒಗಳು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಸರ್ಕಾರ, ತಕ್ಷಣವೇ ಹೊಸ ಕೊಠಡಿಗಳನ್ನು ನಿರ್ಮಿಸಿದೆ.
ಇದರೊಂದಿಗೆ, ಸ್ಮಾರ್ಟ್ ಸಿಟಿ ಯೋಜನೆಯಡಿ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕ ಎಐ (AI) ಕ್ಲಾಸ್‌ರೂಮ್ ನಿರ್ಮಾಣವಾಗಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪರಿಚಯಿಸುವ ಮಹತ್ವದ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ 5 ಕೊಠಡಿಗಳ ನಿರ್ಮಾಣಕ್ಕೂ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಈ ಶಾಲೆಯನ್ನು ಕೆಪಿಸಿ) ಶಾಲೆಯಾಗಿ ಘೋಷಿಸಿದ್ದಕ್ಕಾಗಿ ಶಾಸಕ ಆಸೀಫ್ ಸೇಠ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಪಿಯುಸಿ ಪ್ರಥಮ ಮತ್ತು ದ್ವಿತೀಯ ಶಿಕ್ಷಣವನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಬಿಇಓ ಲೀಲಾವತಿ ಭಜಂತ್ರಿ, ಸೇರಿದಂತೆ ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು, ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.
