Bagalkote

ಬಾಗಲಕೋಟೆಯಲ್ಲಿ ಹೋಳಿ ಸಂಭ್ರಮದ ನಡುವೆ ಕಿಡಿಗೇಡಿತನ: ಮಸೀದಿ ಮುಂದೆ ಅಪ್ರಾಪ್ತನಿಂದ “ಜೈ ಶ್ರೀರಾಮ” ಬರೆಸಿದ ಆರೋಪಿ ಬಂಧನ

Share

• ಮಸೀದಿ ಮುಂದೆ ವಿವಾದಿತ ಬರಹ: ಕಿಡಿಗೇಡಿ ಬಂಧನ
• ಆಟೋ ಚಾಲಕನ ಮಾತಿಗೆ ಮರುಳಾದ ಅಪ್ರಾಪ್ತ
• ಸಿಸಿಟಿವಿ ದೃಶ್ಯದಿಂದ ಬಯಲಾಯ್ತು ಆರೋಪಿಯ ಕೃತ್ಯ
• ಬಾಗಲಕೋಟೆ ಪೊಲೀಸರಿಂದ ಶಾಂತಿ ಕಾಪಾಡಲು ಮನವಿ

ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಡಗರದ ನಡುವೆಯೇ ಸೌಹಾರ್ದತೆ ಕೆಡಿಸುವ ಯತ್ನವೊಂದು ನಡೆದಿದೆ. ನವನಗರದ ಮಸೀದಿಯೊಂದರ ಮುಂದೆ ವಿವಾದಿತ ಬರಹ ಬರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿ ಹಾಗೂ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 44 ರಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸ್ಥಳೀಯ ಮಸೀದಿಯ ಮುಂಭಾಗದಲ್ಲಿ ‘ಜೈ ಶ್ರೀರಾಮ್’ ಎಂಬ ಬರಹವನ್ನು ಬರೆಯಲಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ನವನಗರ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಯಮನೂರು ಭಜಂತ್ರಿ ಎಂಬ ಆಟೋ ಚಾಲಕ, ಅಪ್ರಾಪ್ತ ಬಾಲಕನೊಬ್ಬನಿಗೆ ಪ್ರಚೋದನೆ ನೀಡಿ ಈ ಬರಹವನ್ನು ಬರೆಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಕರಣದ ಗಂಭೀರತೆ ಅರಿತ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಅವರು ತಕ್ಷಣವೇ ಕ್ರಮ ಕೈಗೊಂಡು ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರು. ಸದ್ಯ ಆಟೋ ಚಾಲಕ ಯಮನೂರು ಭಜಂತ್ರಿಯನ್ನು ಬಂಧಿಸಲಾಗಿದ್ದು, ಬರಹ ಬರೆದ ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

Tags:

error: Content is protected !!