DEATH

ಹಲಗಾ ಸಂತ ಶಿಶುನಾಳ ಶರೀಫ್ ಅಜ್ಜರಂತಿದ್ದ ಧಾಕಲು ಕಾಕಾ ನಿಧನ

Share

ಜಾತಿ-ಧರ್ಮಗಳ ಹಂಗಿಲ್ಲದೆ ಮನುಷ್ಯತ್ವವನ್ನೇ ಉಸಿರಾಗಿಸಿಕೊಂಡು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂತ ಶಿಶುನಾಳ ಶರೀಫ್ ಅಜ್ಜರಂತಿದ್ದ ಹಿರಿಯ ಚೇತನ ಧಾಕಲು ಫಕೀರಾ ಬಿಳಗೋಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಆರು ದಶಕಗಳ ಕಾಲ ದರ್ಗಾದ ಸೇವಕರಾಗಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದ ಅವರ ಅಗಲಿಕೆ ಇಡೀ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಪ್ರಗತಿಪರ ರೈತ ಹಾಗೂ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷರಾಗಿದ್ದ ಧಾಕಲು ಫಕೀರಾ ಬಿಳಗೋಜಿ (88) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಳೆದ 60 ವರ್ಷಗಳಿಂದ ಹಜರತ್ ಬೀಬಿ ಫಾತಿಮಾ ದರ್ಗಾದ ಮುಖ್ಯ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಹಿಂದೂ-ಮುಸ್ಲಿಂ ಭಾವೈಕ್ಯತೆಯ ಜೀವಂತ ಸಂಕೇತವಾಗಿದ್ದರು. ಗ್ರಾಮದ ಪ್ರತಿಯೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಎಲ್ಲ ಸಮುದಾಯಗಳನ್ನು ಒಂದೇ ವೇದಿಕೆಗೆ ತರುವಲ್ಲಿ ಅವರು ವಹಿಸಿದ್ದ ಪಾತ್ರ ಅವಿಸ್ಮರಣೀಯ.

ಗ್ರಾಮದ ಪ್ರತಿಯೊಬ್ಬರ ಸಮಸ್ಯೆಗಳಿಗೆ ತಾಳ್ಮೆಯಿಂದ ಸ್ಪಂದಿಸುತ್ತಿದ್ದ ಧಾಕಲು ಕಾಕಾ, ಹಲಗಾ ಪಂಚಕ್ರೋಶಿಯಲ್ಲಿ ‘ಸೌಹಾರ್ದತೆಯ ಆಧಾರಸ್ತಂಭ’ ಎಂದೇ ಗುರುತಿಸಲ್ಪಟ್ಟಿದ್ದರು. ಅವರ ನಿಧನದಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು,ಅವರ ಅಂತ್ಯಯಾತ್ರೆಗೆ ಅಪಾರ ಜನಸ್ತೋಮ ಹರಿದು ಬಂದಿತ್ತು. ಹಿಂದೂ ಮುಸ್ಲಿಂ ಬಾಂಧವರು ಅವರವರ ಪರಂಪರೆಯಂತೆ ಧಾಕಲು ಕಾಕಾರಿಗೆ ಗೌರವ ಸಮರ್ಪಿಸಿದ್ದು, ಸೌಹಾರ್ದತೆಯ ಪ್ರತೀಕವಾಗಿತ್ತು.

ಮೃತರ ಗೌರವಾರ್ಥ ಸೋಮವಾರ ಬೆಳಿಗ್ಗೆ 8 ಗಂಟೆಗೆ ಹಲಗಾ ಸ್ಮಶಾನಭೂಮಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಧಾಕಲು ಅಜ್ಜನವರ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಅವರು ಗೈದ ಸೇವೆ ಸಂತ ಶಿಶುನಾಳ ಶರೀಫರಂತೆ ಮಾಡಿದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಾಕ್ಷಿಯಾಗಿತ್ತು.

Tags:

error: Content is protected !!