ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸುಮನ್ ಅಜ್ಜಿ ಸಾಬೀತುಪಡಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸುವ ಮೂಲಕ ಬೆಳಗಾವಿಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ್ದಾರೆ.



ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸದಸ್ಯರಾದ ಸುಮನ್ ಅಜ್ಜಿ ಅವರು ವಿಶಾಖಪಟ್ಟಣಂನಲ್ಲಿ ನಡೆದ ಕೇಂದ್ರ ಸರ್ಕಾರದ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ ವತಿಯ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಇಂದು ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮಹಾಪೌರ ಹಾಗೂ ಆಶ್ರಮದ ಪ್ರಮುಖರಾದ ವಿಜಯ್ ಮೋರೆ ಅವರು, ಅಜ್ಜಿಯ ಫಿಟ್ನೆಸ್ ಕಂಡು ಕೇಂದ್ರ ಸರ್ಕಾರ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಹ್ವಾನಿಸಿತ್ತು ಎಂದು ಹೆಮ್ಮೆಯಿಂದ ತಿಳಿಸಿದರು.


ಸುಮಾರು 10 ಸಾವಿರಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಭಾಗವಹಿಸಿದ್ದ ಈ ಬೃಹತ್ ಸ್ಪರ್ಧೆಗೆ ಸುಮನ್ ಅಜ್ಜಿ ಚಾಲನೆ ನೀಡಿದರು. ಆಶ್ರಮದ ಪ್ರತಿನಿಧಿಗಳಾಗಿ ಆಲನ್ ಮೋರೆ ಮತ್ತು ಶರಲ್ ಮೋರೆ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೃದ್ಧಾಪ್ಯದಲ್ಲೂ ಅಜ್ಜಿಯ ಚಟುವಟಿಕೆ ಮತ್ತು ಆರೋಗ್ಯದ ಶಿಸ್ತನ್ನು ಪರಿಗಣಿಸಿ ಈ ಅತ್ಯುನ್ನತ ಗೌರವ ನೀಡಲಾಗಿದ್ದು, ಇದು ಬೆಳಗಾವಿ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಜಯ್ ಮೋರೆ ಹರ್ಷ ವ್ಯಕ್ತಪಡಿಸಿದರು

