ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ವಿವಿಧ ರಾಜಕೀಯ ಬೆಳವಣಿಗೆಗಳ ಕುರಿತು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಭಾವಿ ಸ್ವಾಮೀಜಿ ಕರೆ ಮಾಡಿ ರಕ್ಷಣೆ ಕೋರಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರು ನನ್ನನ್ನು ಅಪ್ರೋಚ್ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಿಎಂ ಕರೆದಿರುವ ಡಿನ್ನರ್ ಸಭೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸಿಎಂ ಕರೆದರೆ ಹೋಗುತ್ತೇವೆ, ಡಿಸಿಎಂ ಕರೆದರೂ ಹೋಗುತ್ತೇವೆ” ಎಂದು ಹೇಳಿದರು.

ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಮಾತನಾಡಿದ ಅವರು, “ಅದು ಕೇವಲ ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತಿರುವ ಚರ್ಚೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಹೇಳಿದರು.
ಕೆಪಿಎಸ್ಸಿ ಅಕ್ರಮ ಆರೋಪ ಕುರಿತು, “ಯಾವುದೇ ಅಕ್ರಮ ನಡೆದಿದ್ದರೆ ಸರ್ಕಾರ ತನಿಖೆ ಮಾಡುತ್ತದೆ” ಎಂದರು.
ಫೋನ್ ಟ್ಯಾಪಿಂಗ್ ಆರೋಪಗಳನ್ನು ತಳ್ಳಿ ಹಾಕಿದ ಅವರು, “ಅದೆಲ್ಲ ಬೋಗಸ್” ಎಂದು ಹೇಳಿದರು.
ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸುವ ವಿಚಾರಕ್ಕೆ ಆಂಧ್ರ ವಿರೋಧ ಕುರಿತು ಮಾತನಾಡಿದ ಸಚಿವರು, “ಆಂಧ್ರ ಮೊದಲಿನಿಂದಲೂ ವಿರೋಧ ಮಾಡುತ್ತಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಆದರೆ ನಮ್ಮ ಎಂಪಿಗಳು ಕೇಂದ್ರದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ” ಎಂದು ಆರೋಪಿಸಿದರು. ಈ ವೇಳೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ಮೇಲೂ ಟೀಕೆ ಮಾಡಿದರು.
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ತಮ್ಮ ಬೆಂಬಲವಿದೆ ಎಂದು ಸಚಿವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರವನ್ನು “ನಾಲಾಯಕ ಸರ್ಕಾರ” ಎಂದು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ವಿಜಯೇಂದ್ರರನ್ನು ಅವರ ಪಕ್ಷದಲ್ಲೇ ಯಾರೂ ಒಪ್ಪುತ್ತಿಲ್ಲ. ಪುತ್ರ ವ್ಯಾಮೋಹದಿಂದ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕ ಆದವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಶೋಕ್, ಬೊಮ್ಮಾಯಿ, ಶೆಟ್ಟರ್ ಯಾರೂ ಒಪ್ಪುತ್ತಿಲ್ಲ” ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರವೇ ನಾಲಾಯಕ ಸರ್ಕಾರವಾಗಿತ್ತು ಎಂದು ಕೂಡ ಅವರು ಟೀಕಿಸಿದರು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ರಾಜಕೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
“ಭಾರತದ ವಿದೇಶಾಂಗ ನೀತಿಯನ್ನು ಮರೆತು ಬೇರೆ ದೇಶಗಳೊಂದಿಗೆ ಹೊಂದಾಣಿಕೆ ಮಾಡುತ್ತಿದ್ದಾರೆ. ಜಾಗತಿಕ ಯುದ್ಧ ಪರಿಸ್ಥಿತಿ ಕೈಗಾರಿಕೆ ಹಾಗೂ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಹೇಳಿದರು.
