Chikkodi

ಕೃಷ್ಣಾ ಮೇಲ್ದಂಡೆ ಯೋಜನೆಗೆ 70 ಸಾವಿರ ಕೋಟಿ: ವಿಜಯೇಂದ್ರ ಟೀಕೆಗೆ ಡಿ.ಕೆ.ಶಿ ಖಡಕ್ ತಿರುಗೇಟು

Share

ರಾಜ್ಯದ ನೀರಾವರಿ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಈಗ ದೆಹಲಿ ಮಟ್ಟದಲ್ಲಿ ಹೋರಾಟಕ್ಕೆ ಸಜ್ಜಾಗಿದೆ. ಚಿಕ್ಕೋಡಿಯ ಯಡೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ವಿಚಾರದಲ್ಲಿ ನೆರೆ ರಾಜ್ಯಗಳ ಅಡೆತಡೆಗಳ ವಿರುದ್ಧ ಗುಡುಗಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಸರ್ಕಾರವನ್ನು ‘ನಾಲಾಯಕ್’ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ವಿಚಾರದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಡ್ಡಿಪಡಿಸುತ್ತಿರುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ನಮ್ಮ ಹಕ್ಕಿನ ನೀರಿಗಾಗಿ ನಾವು 70 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ತೀರ್ಮಾನಿಸಿದ್ದೇವೆ. ನೆರೆ ರಾಜ್ಯಗಳು ನಮ್ಮ ಮೇಲೆ ನಡೆಸುತ್ತಿರುವ ಗದಾಪ್ರಹಾರವನ್ನು ನಿಲ್ಲಿಸಬೇಕು. ಈ ಸಂಬಂಧ ದೆಹಲಿಯಲ್ಲಿ ರಾಜ್ಯದ ಎಲ್ಲಾ ಸಂಸದರ ಸಭೆ ಕರೆದು, ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹೇರಲಾಗುವುದು” ಎಂದು ಕೇಂದ್ರದ ಮಧ್ಯಸ್ಥಿಕೆಗೆ ಆಗ್ರಹಿಸಿದರು.

ಇನ್ನು ಕಾಂಗ್ರೆಸ್ ಸರ್ಕಾರವನ್ನು ‘ನಾಲಾಯಕ್’ ಎಂದು ಟೀಕಿಸಿದ್ದ ಬಿ.ವೈ. ವಿಜಯೇಂದ್ರ ಅವರಿಗೆ ಡಿ.ಕೆ. ಶಿವಕುಮಾರ್ ಕೌಂಟರ್ ನೀಡಿದ್ದಾರೆ. “ಅವರದ್ದು ನಾಲಾಯಕ್ ಸರ್ಕಾರ ಇದ್ದದ್ದಕ್ಕೆ ಈಗ ಜನ ಲಾಯಕ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಟೀಕೆ ಮಾಡುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದರು. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳ ಹಿತದೃಷ್ಟಿಯಿಂದ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುವುದಿಲ್ಲ ಎಂದು ಯಡೂರಿನಲ್ಲಿ ಸ್ಪಷ್ಟಪಡಿಸಿದರು.

Tags:

error: Content is protected !!